ಹಾಸನ: ಪ್ಯಾರಾಒಲಂಪಿಕ್ ನಲ್ಲಿ ಸಾಧನೆ ಮಾಡುವ ಯುವ ಪ್ರತಿಭೆಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸಮಾಜದ ಪ್ರತಿಯೊಬ್ಬರು ಮಾಡಬೇಕು ಎಂದು ಟೈಮ್ಸ್ ಗಂಗಾಧರ್ ಬಿ.ಕೆ. ಹೇಳಿದರಯ.
ನಗರದ ರಿಂಗ್ ರಸ್ತೆಯಲ್ಲಿರುವ ಯುನಿಕಾರ್ನ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಶುಕ್ರವಾರ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ನಡೆದ ವಾರದ ಸಭೆಯಲ್ಲಿ ಅಂತರಾಷ್ಟ್ರೀಯ ಪ್ಯಾರಾ ಒಲಂಪಿಕ್ಸ್ ನಲ್ಲಿ ಸಾಧನೆ ಮಾಡಿದ ಹಿತನ್ ಗೌಡ ಅವರನ್ನು ಸನ್ಮಾನಿ ಮಾತನಾಡಿದ ಅವರು, ದೈಹಿಕವಾಗಿ ಆರೋಗ್ಯವಾಗಿರುವ ಮಕ್ಕಳೇ ಇಂದು ಕ್ರೀಡೆಯ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.
ಹೀಗಿರುವಾಗ ಯಾವುದೋ ಒಂದು ಕಾರಣಕ್ಕೆ ಅಂಗವೈಕಲ್ಯವಿದ್ದರು ಮಾನಸಿಕವಾಗಿ ಕುಗ್ಗದೆ ಆತ್ಮಸ್ಥೈರ್ಯದಿಂದ ಸಾಧನೆ ಮಾಡುವವರಿಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು. ಆತ್ಮವಿಶ್ವಾಸ, ಛಲ ಮೈಗೂಡಿಸಿಕೊಂಡರೆ ಯಾವ ಸಾಧನೆಗೂ ಅಡ್ಡಿ ಉಂಟಾಗುವುದಿಲ್ಲ.
ಪ್ಯಾರಾ ಒಲಂಪಿಕ್ ನಲ್ಲಿ ನಮ್ಮ ಜಿಲ್ಲೆಯ ಇಬ್ಬರು ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದು, ಇದೀಗ ಜಾವಲಿನ್ ಕ್ರೀಡೆಯಲ್ಲಿ ಹಿತನ್ ಗೌಡ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಅವರ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುವ ಭರವಸೆಯನ್ನು ಇಂಗಿತ ವ್ಯಕ್ತಪಡಿಸಿದ್ದು, ಪೋಷಕರ ಅವರ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವುದು ಶ್ಲಾಘನೀಯ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಕೇವಲ ಓದಿಗೆ ಮಿಸಲಾಗಿರಿಸದೆ ಕ್ರೀಡೆ ಸೇರಿದಂತೆ ಇನ್ನಿತರ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಲು ಸ್ಫೂರ್ತಿ ತುಂಬ ಬೇಕು. ಹಿತನ್ ಅವರ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ರೋಟರಿ ಕ್ಲಬ್ ಸಹಕಾರಿಯಾಗಿ ನಿಲ್ಲಲಿದೆ ಎಂದು ಹೇಳಿದರು.
ಯುನಿಕಾರ್ನ್ ಸ್ಪೋರ್ಟ್ಸ್ ಅಕಾಡೆಮಿಯ ಮುಖ್ಯಸ್ಥ ಭಾನು ಮಾತನಾಡಿ, ಹಾಸನ ನಗರ ಸೇರಿದಂತೆ ಜಿಲ್ಲೆಯಲ್ಲಿ ಅನೇಕ ಯುವ ಕ್ರೀಡಾ ಪ್ರತಿಭೆಗಳು ಇದ್ದು, ಅವರುಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಈ ಸಂಸ್ಥೆ ಆರಂಭಿಸಲಾಗಿದೆ. ಸಮಾಜಕ್ಕೆ ನಮ್ಮಿಂದ ಏನನ್ನಾದರೂ ಕೊಡುಗೆ ನೀಡಬೇಕೆಂಬ ಸದುದ್ದೇಶದಿಂದ ಈ ಸಂಸ್ಥೆ ಆರಂಭಿಸಲಾಗಿದೆ.
ನಮ್ಮ ಸಂಸ್ಥೆಯಲ್ಲಿ ಪ್ಯಾರಾ ಒಲಂಪಿಕ್ ನಲ್ಲಿ ಸಾಧನೆ ಮಾಡಿದ ಯುವ ಕ್ರೀಡಾಪಟು ಹಿತನ್ ಅವರನ್ನು ಗೌರವಿಸುವ ಅವಕಾಶ ಸಿಕ್ಕಿರುವುದು ಸಂತಸ ನೀಡಿದೆ. ಹಿತನ್ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಯುವ ಕ್ರೀಡಾಪಟುಗಳಿಗೆ ಮುಂದಿನ ದಿನಗಳಲ್ಲಿ ಸಹಕಾರ ನೀಡಲಾಗುವುದು ಎಂದರು.
ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಕಾರ್ಯದರ್ಶಿ ರವಿ ಕುಮಾರ್ ಪಿ., ಖಜಾಂಚಿ ದಿಲೀಪ್ ಕುಮಾರ್ ಎಚ್.ಕೆ. ಹಾಗೂ ಇತರರು ಹಾಜರಿದ್ದರು.










