ಸಕಲೇಶಪುರ: ರಸ್ತೆಯಲ್ಲಿ ತರಕಾರಿ ಅಂಗಡಿ ಇಟ್ಟವನಿಗೆ ಸಮುದಾಯ ಸೇವೆಯ ಶಿಕ್ಷೆ ವಿಧಿಸಿದ ನ್ಯಾಯಾಲಯ-ಹಯಾತ್ ಖಾನ್‌ ಈಗ ನಾಲ್ಕು ದಿನಗಳು ಪೊಲೀಸ್ ಠಾಣೆ ಕಸ ಗುಡಿಸಬೇಕು

ಸಕಲೇಶಪುರ: ರಸ್ತೆಗೆ ಅಡ್ಡಲಾಗಿ ತರಕಾರಿ ಅಂಗಡಿ ಹಾಕಿಕೊಂಡು ಜನರ ಓಡಾಟಕ್ಕೆ ಅಡ್ಡಿಯುಂಟು ಮಾಡಿದ್ದ ಪ್ರಕರಣವೊಂದರಲ್ಲಿ ನ್ಯಾಯಾಲಯ ಆರೋಪಿಗೆ ಸಮುದಾಯ ಸೇವೆ ಮಾಡುವಂತೆ ಶಿಕ್ಷೆ ಪ್ರಕಟಿಸಿದೆ.

ಹೌದು, ಸಕಲೇಶಪುರ ನಗರ ಪೊಲೀಸ್ ಠಾಣೆ ದಾಖಲಿಸಿದ ಪ್ರಕರಣದಲ್ಲಿ ಬಾಳೆಗದ್ದೆ ನಿವಾಸಿ ಹಯಾತ್ ಖಾನ್ ಅವರಿಗೆ ಸಕಲೇಶಪುರ ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯವು ಸಮುದಾಯ ಸೇವೆ ಶಿಕ್ಷೆ ವಿಧಿಸಿದೆ.

ಹಯಾತ್ ಖಾನ್ ಅವರು ಸೆಪ್ಟೆಂಬರ್ 18ರಂದು ಸಕಲೇಶಪುರದ ಹಳೆ ಬಸ್ ನಿಲ್ದಾಣ ಸಮೀಪ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಅಂಗಡಿ ಹಾಕಿಕೊಂಡು ತರಕಾರಿ ಮತ್ತು ಸೊಪ್ಪು ಮಾರಾಟ ಮಾಡುತ್ತಿದ್ದರು.

ಇದರಿಂದ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ (K.P.Act) ಮತ್ತು ಭಾರತೀಯ ನ್ಯಾಯ ಸಂಹಿತೆ (BNS)ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ನ್ಯಾಯಾಲಯವು ಸೆ. 19ರಂದು ನೀಡಿದ ತೀರ್ಪಿನಲ್ಲಿ ಹಯಾತ್ ಖಾನ್ ಅವರಿಗೆ ನಾಲ್ಕು ದಿನಗಳು ಪ್ರತಿದಿನ ಎರಡು ಗಂಟೆಗಳ ಕಾಲ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಕಸ ಗುಡಿಸುವುದು ಹಾಗೂ ಸ್ವಚ್ಚತೆಯ ಕಾರ್ಯ ನಿರ್ವಹಿಸುವಂತೆ ದಂಡದ ರೂಪದಲ್ಲಿ ಆದೇಶಿಸಿದೆ. ಈ ಸಮುದಾಯ ಸೇವೆ ಸೆಪ್ಟೆಂಬರ್ 20ರಿಂದ 24ರವರೆಗೆ ಜಾರಿಯಲ್ಲಿರಲಿದೆ. ಸೇವೆ ಸಮರ್ಪಕವಾಗಿಲ್ಲವೆಂದು ಕಂಡುಬಂದರೆ ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಲಾಗುವುದು ಎಂದು ನ್ಯಾಯಾಲಯದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆದೇಶದ ಪ್ರತಿ ಸಕಲೇಶಪುರ ಪಟ್ಟಣ ಪೊಲೀಸ್ ಠಾಣಾಧಿಕಾರಿಗೆ ಕಳುಹಿಸಲಾಗಿದ್ದು, ಸೇವೆಯ ಪಾಲನೆ ಮತ್ತು ಮೇಲ್ವಿಚಾರಣೆ ಮಾಡಿ ವರದಿ ಸಲ್ಲಿಸಲು ಸೂಚಿಸಲಾಗಿದೆ.