ಅರಸೀಕೆರೆ: ಹಳದಿ-ಕೆಂಪು ಬಣ್ಣ ಬಳಿಸುವಂತೆ ಮನವಿ

ಅರಸೀಕೆರೆ: ನಗರದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ 206 ಟಿಎಚ್ ರಸ್ತೆ ಸೇರಿದಂತೆ ನಗರ ವ್ಯಾಪ್ತಿಗೆ ಬರುವ ಹಾಸನ ರಸ್ತೆಯ ರಸ್ತೆ ವಿಭಜಕದ ಮಧ್ಯೆ ನಗರಸಭೆ ಅಳವಡಿಸಿರುವ ಕಬ್ಬಿಣದ ಸರಳಿನ ತಡೆಗೋಡೆಗೆ ಕನ್ನಡ ಬಾವುಟದ ಕಲರ್, ಹಳದಿ ಮತ್ತು ಕೆಂಪು ಬಣ್ಣ ಬಳಿಯುವಂತೆ ಶಾಸಕ ಕೆ.ಎಂ ಶಿವಲಿಂಗೇಗೌಡ, ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರಿಗೆ ಕರವೇ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.

ಕರವೇ ಕಾರ್ಯಕರ್ತರ ಮನವಿ ಆಲಿಸಿದ ಶಿವಲಿಂಗೇಗೌಡ ಮಾತನಾಡಿ, ತಮ್ಮ ಮನವಿ ಅರ್ಥಪೂರ್ಣವಾಗಿದೆ. ಈ ಸಂಬಂಧ ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಕರವೇ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್ ನೇತೃತ್ವ ಕರವೇ ಮುಖಂಡರಿಗೆ ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಪ್ರತಿಕ್ರಿಯಿಸಿ ಕನ್ನಡ ಧ್ವಜಕ್ಕೆ ಗೌರವ ಸಲ್ಲಿಸುವುದು, ನಾಡಿನ ಸಂಸ್ಕ್ರತಿಯನ್ನು ಪಾಲಿಸುವುದು ಹಾಗೂ ಕಲೆ, ಸಾಹಿತ್ಯ ಮತ್ತು ಕಲಾವಿದರನ್ನು ಪೋಷಿಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯವಾಗಿದೆ.

ಈ ನಿಟ್ಟಿನಲ್ಲಿ ಕನ್ನಡ ಅಭಿಮಾನ ಮೂಡಿಸುವ ಹಾಗೂ ಬೆಂಬಲಿಸುವ ಎಲ್ಲಾ ಕೆಲಸ ಕಾರ್ಯಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲು ನಗರ ಸಭೆ ಆಡಳಿತ ಬದ್ಧವಾಗಿದೆ ಎಂದರು.

ತಾಲೂಕು ಕರವೇ ಅಧ್ಯಕ್ಷ ಕಿರಣ್ ಕುಮಾರ್ ಮಾತನಾಡಿ, ರಸ್ತೆ ವಿಭಜಕದ ಮಧ್ಯೆ ಅಳವಡಿಸಿರುವ ಕಬ್ಬಿಣದ ಸರಪಳಿ ತಡೆಗೋಡೆಗೆ ಹಳದಿ ಮತ್ತು ಕೆಂಪು ಬಣ್ಣ ಬಳಿಯುವುದರ ಜೊತೆಗೆ ಸರ್ಕಾರಿ ಕಟ್ಟಡಗಳ ಮೇಲೆ, ಸಾರ್ವಜನಿಕ ಸ್ಥಳಗಳಲ್ಲಿ ನಾಡಿನ ಸಂಸ್ಕ್ರತಿ ಸಾರುವ ಹಾಗೂ ಸಾಹಿತಿಗಳು, ಕನ್ನಡ ಪರ ಹೋರಾಟಗಾರರ ಚಿತ್ರಗಳನ್ನು ಬಿಡಿಸಿ ಮಕ್ಕಳಲ್ಲಿ ಕನ್ನಡ ಅಭಿಮಾನದ ಜೊತೆಗೆ ನಾಡು ನುಡಿಗಾಗಿ ಶ್ರಮಿಸಿದ ಮಹನೀಯರ ಕಿರು ಪರಿಚಯ ಮಾಡಿಕೊಡುವ ಕೆಲಸವನ್ನು ನಗರಸಭೆ ಮಾಡಿಕೊಡುವ ಮೂಲಕ ಕನ್ನಡ ಅಭಿಮಾನ ಮೆರೆಯುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕರವೇ ನಗರ ಅಧ್ಯಕ್ಷ ಸಂತೋಷ್, ಕಾಂಗ್ರೆಸ್ ಮುಖಂಡ ಮಂಜುರಾಜ್, ನಗರಸಭೆ ಸದಸ್ಯ ವೆಂಕಟಮುನಿ ಸೇರಿದಂತೆ ಕರವೇ ಸಂಘಟನೆ ಪದಾಧಿಕಾರಿಗಳಾದ ಶೇಖರ,
ಸುನೀಲ್ ಮೊದಲಾದವರಿದ್ದರು.