ಹಾಸನ: ನಗರದ ರಾಜಾಜಿನಗರದಲ್ಲಿ ನೂತನವಾಗಿ ತೆರೆಯಲಾಗುತ್ತಿರುವ ಮದ್ಯದಂಗಡಿಯ ವಿರುದ್ಧ ನೂರಾರು ಮಹಿಳೆಯರು ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಸಾವಿರಾರು ಮನೆಗಳು, ಕುಟುಂಬಗಳು ವಾಸಿಸುತ್ತಿರುವ ಜನ ವಸತಿ ಪ್ರದೇಶದಲ್ಲೇ ಬಾರ್ ತೆರೆಯಲು ಅಬಕಾರಿ ಇಲಾಖೆ ಅನುಮತಿ ನೀಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜನರ ವಿರೋಧದ ನಡುವೆಯೂ ಅನುಮತಿ ನೀಡಿರುವ ಅಧಿಕಾರಿಗಳ ನಿರ್ಲಕ್ಷ್ಯವನ್ನು ಮಹಿಳೆಯರು ತೀವ್ರವಾಗಿ ಖಂಡಿಸಿದರು.
“ಸಾರ್ವಜನಿಕರ ವಿರೋಧ ಇದ್ದರೆ ಬಾರ್ ಬೇರೆಡೆಗೆ ಸ್ಥಳಾಂತರಿಸಬೇಕು” ಎಂಬ ನಿಯಮವಿದ್ದರೂ ಅಧಿಕಾರಿಗಳು ದ್ವಂದ್ವ ನಿಲುವು ತಾಳಿರುವುದಾಗಿ ಪ್ರತಿಭಟನಾಕಾರಿಣಿಯರು ಆರೋಪಿಸಿದರು.
ಬಾರ್ ಎದುರೇ ಧರಣಿ ಕುಳಿತು ಘೋಷಣೆ ಕೂಗಿದ ಮಹಿಳೆಯರು, ಕಟ್ಟಡ ಮಾಲೀಕರು ಹಾಗೂ ಬಾರ್ ಲೈಸೆನ್ಸ್‌ದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ನಮ್ಮ ವಸತಿ ಪ್ರದೇಶದಲ್ಲಿ ಬಾರ್ ತೆರೆಯಲು ಬಿಡುವುದಿಲ್ಲ” ಎಂದು ನೂರಾರು ಮಹಿಳೆಯರು ಸ್ಪಷ್ಟಪಡಿಸಿದರು.










