ಹಾಸನ :ಹಾಸನ ಮಹಾನಗರಪಾಲಿಕೆ ಮೇಯರ್ ಸ್ಥಾನಕ್ಕೆ ಜೆಡಿಎಸ್ ನ ಗಿರೀಶ್ ಚನ್ನವೀರಪ್ಪ ಆಯ್ಕೆ ನಂತರ ಎಂಎಲ್‌ಸಿ ಡಾ. ಸೂರಜ್ ರೇವಣ್ಣ, ಕಳೆದ ಅವಿಶ್ವಾಸ ಮಂಡನೆ ಸಭೆಯ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಅನುಸರಿಸಿದ್ದ ನಡೆಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
“ಇಷ್ಟು ದಿನ ಸ್ವಲ್ಪ ಗೊಂದಲವಿತ್ತು, ಇವತ್ತು ಜಿಲ್ಲೆಗೆ ಒಂದು ಕ್ಲಿಯರ್ ಮೆಸೇಜ್ ಹೋಗಿದೆ. ಎಲ್ಲಾ ಸದಸ್ಯರು ಒಮ್ಮತವಾಗಿ ಬೆಂಬಲ ನೀಡಿದ್ದಾರೆ” ಎಂದು ಡಾ. ಸೂರಜ್ ರೇವಣ್ಣ ಹೇಳಿದರು.
“ಈ ಹಿಂದೆ ಚಂದ್ರೇಗೌಡ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೆವು. ಎಲ್ಲರಿಗೂ ಅವಕಾಶ ಸಿಗಲಿ ಎಂಬುದು ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಇನ್ನೂ ಇಬ್ಬರು ಸದಸ್ಯರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಅವಿಶ್ವಾಸ ನಿರ್ಣಯ ಸಭೆಯ ವಿಚಾರವನ್ನು ನೆನಪಿಸಿಕೊಂಡ ಅವರು ಮಾಧ್ಯಮಗಳ ವರದಿಗಳನ್ನು ಪ್ರಶ್ನಿಸಿ, “ಅವಿಶ್ವಾಸ ನಿರ್ಣಯ ಸಭೆಯಲ್ಲಿ ಜೆಡಿಎಸ್‌ಗೆ ಮುಖಭಂಗ ಅಂತ ಹೆಡ್‌ಲೈನ್ ಹಾಕಿದ್ರಿ. ಇವತ್ತು ಅಪವಿತ್ರ ಮೈತ್ರಿಗೆ ಮುಖಭಂಗ ಅಂತಾ ಹೆಡ್‌ಲೈನ್ ಹಾಕ್ತೀರಾ ಅಥವಾ ಮಾಜಿ ಶಾಸಕರ ನಡೆ ಯಾವ ಕಡೆ ಅಂತಾ ಹಾಕ್ತೀರಾ?” ಎಂದು ಕಟಕಿಯಾಡಿದರು.
ಡಾ. ಸೂರಜ್ ರೇವಣ್ಣ ತಮ್ಮ ಮಾತಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯ ಬಲವರ್ಧನೆಯನ್ನು ಉಲ್ಲೇಖಿಸಿ, “ಬಿಜೆಪಿ-ಜೆಡಿಎಸ್ ಮೈತ್ರಿ ದೊಡ್ಡ ಮಟ್ಟದಲ್ಲಿ ಆಗಿದೆ. ಮಾಜಿ ಶಾಸಕರು, ಸಂಸದರು ಒಟ್ಟಿಗೆ ಇರುತ್ತಾರೆ, ಗಣೇಶೋತ್ಸವದಲ್ಲಿ ಕುಣಿಯುತ್ತಾರೆ, ಜೈಕಾರ ಹಾಕುತ್ತಾರೆ. ಬಿಜೆಪಿಯನ್ನು ನಾವು ರಾಷ್ಟ್ರೀಯ ಪಕ್ಷವಾಗಿ ಗೌರವಿಸುತ್ತೇವೆ. ಆದರೆ ಸ್ಥಳೀಯ ರಾಜಕೀಯ ನೋಡಿದ್ರೆ ದಿಗ್ಭ್ರಮೆ ವ್ಯಕ್ತಪಡಿಸಬೇಕಾಗುತ್ತದೆ. ಸ್ಥಳೀಯವಾಗಿ ಏನು ನಡೆಯುತ್ತಿದೆ ಎಂಬುದು ನನಗೂ, ಶಾಸಕರಿಗೂ ಗೊಂದಲವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವರು ತಮಗೂ, ಶಾಸಕರಿಗೂ ಅವಿಶ್ವಾಸ ನಿರ್ಣಯ ಸಭೆಯ ಸಂದರ್ಭದಲ್ಲಿ ಬೇಸರ ಉಂಟಾದದ್ದು, ಅದರಿಂದ ಸಭೆಯಿಂದ ಹೊರ ನಡೆದಿದ್ದೇವೆ ಎಂದು ವಿವರಿಸಿದರು. “ಅವತ್ತು ಕಾಂಗ್ರೆಸ್, ಬಿಜೆಪಿ ಪಕ್ಷದವರು ಸೇರಿ ಜೈಕಾರ ಹಾಕಿದ್ರು. ಆದರೆ ಇವತ್ತು ಒಗ್ಗಟ್ಟಿಗೆ ಪ್ರತಿಫಲ ಸಿಕ್ಕಿದೆ” ಎಂದರು.
ಮಾಜಿ ಶಾಸಕರಾದ ಪ್ರೀತಂಗೌಡ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ ಡಾ. ಸೂರಜ್ ರೇವಣ್ಣ, “ಕುಮಾರಣ್ಣ, ರೇವಣ್ಣ ಅವರು ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದಾರೆ” ಎಂದೂ ತಿಳಿಸಿದರು.










