ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಆಡಳಿತ ಮಂಡಳಿಯ ವಿರುದ್ಧ ನಡೆದಿದ್ದ ಅವಿಶ್ವಾಸ ಮಂಡನೆ ಸಭೆಯಲ್ಲಿ ಉಂಟಾಗಿದ್ದ ಗೊಂದಲಕ್ಕೆ ಸಹಕಾರ ಇಲಾಖೆ ತೆರೆ ಎಳೆದಿದೆ. ನಡಾವಳಿ ಪುಸ್ತಕದಲ್ಲಿ ನಿರ್ಣಯಕ್ಕೆ ಸಹಿ ಹಾಕಿದ ಹದಿಮೂರು ಸದಸ್ಯರ ಕ್ರಮವನ್ನು ಮಾನ್ಯ ಮಾಡಲಾಗಿದೆ.
ಸೆ.8 ರಂದು ನಡೆದಿದ್ದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಒಟ್ಟು 24 ನಿರ್ದೇಶಕರಲ್ಲಿ 13 ಮಂದಿ ಸರ್ವಾನುಮತದಿಂದ ಕಾರ್ಯಕಾರಿ ಮಂಡಳಿಯ ಮೂವರು ಸದಸ್ಯರ ಅಮಾನತ್ತನ್ನು ತಿರಸ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಅಧ್ಯಕ್ಷ ಆರ್.ಟಿ. ದ್ಯಾವೇಗೌಡ, ಕಾರ್ಯದರ್ಶಿ ಸಿ.ಆರ್. ಜಗದೀಶ ಮತ್ತು ಖಜಾಂಚಿ ಪಾರ್ಶ್ವನಾಥ ವಿಶ್ವಾಸಮತ ಪಡೆಯಲು ವಿಫಲರಾದ ಹಿನ್ನೆಲೆಯಲ್ಲಿ, ಅವರು ತಮ್ಮ ಹುದ್ದೆ ಮುಂದುವರಿಸಲು ಸಾಧ್ಯವಿಲ್ಲವೆಂದು ನಡಾವಳಿಯಲ್ಲಿ ಸ್ಪಷ್ಟವಾಗಿ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ, ಉಪಾಧ್ಯಕ್ಷ ಗುರಪ್ಪನವರ ನೇತೃತ್ವದಲ್ಲಿ 13 ಮಂದಿ ನಿರ್ದೇಶಕರು ನೂತನ ಆಡಳಿತ ಮಂಡಳಿಯನ್ನು ರಚಿಸಿದ್ದು, ಗುರುದೇವ್ ಅವರನ್ನು ಅಧ್ಯಕ್ಷರಾಗಿ, ಜಿ.ಟಿ.ಕುಮಾರ್ ಅವರನ್ನು ಕಾರ್ಯದರ್ಶಿಯಾಗಿ ಹಾಗೂ ಎಸ್.ಜಿ. (ಶ್ರೀಮಂತ್‌ಜಿ.) ಅವರನ್ನು ಖಜಾಂಚಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಪ್ರಕ್ರಿಯೆ ಸಂಪೂರ್ಣ ವೀಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಸಹಕಾರ ಇಲಾಖೆ ಉಪ ನಿಬಂಧಕರು ಹಿಂಬರಹದಲ್ಲಿ ತಿಳಿಸಿದ್ದಾರೆ.
ಸಹಕಾರ ಅಭಿವೃದ್ಧಿ ಅಧಿಕಾರಿ ಜಗದೀಶ.ಎಂ. ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಸಲ್ಲಿಸಿದ ವರದಿ ಪ್ರಕಾರ, 13 ಮಂದಿ ನಿರ್ದೇಶಕರು ಸಮಿತಿಯ ದೈನಂದಿನ ಕಾರ್ಯನಿರ್ವಹಣೆ ಹಾಗೂ ಶೈಕ್ಷಣಿಕ ಹಿತಕ್ಕಾಗಿ ಕಾನೂನಾತ್ಮಕವಾಗಿ ಆಡಳಿತ ನಡೆಸಬಹುದಾಗಿದೆ ಎಂದು ಶಿಫಾರಸು ಮಾಡಲಾಗಿದೆ.
ಈ ಬೆಳವಣಿಗೆಯಿಂದ ಸಮಿತಿಯಲ್ಲಿ ಹೊಸ ನೇತೃತ್ವ ಉದಯವಾಗಿದ್ದರೆ, ಹಳೆಯ ಮಂಡಳಿ ಈ ವರದಿ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಲಿದೆ ಎನ್ನಲಾಗಿದೆ.










