ಹಾಸನ : ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ನಡುವೆ ಬಡಿದಾಟ ನಡೆದಿದೆ.
ಖೋಖೋ ಪಂದ್ಯಾವಳಿ ಮುಗಿದ ನಂತರ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಪರಸ್ಪರ ತಳ್ಳಾಟ–ಬಡಿದಾಟ ನಡೆಸಿದ ಪರಿಣಾಮ ಕ್ರೀಡಾಂಗಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಘಟನೆಯ ಹಿನ್ನೆಲೆಯಲ್ಲಿ ಕ್ರೀಡಾಂಗಣದ ವ್ಯವಸ್ಥೆ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಪ್ರತಿದಿನ ಗಲಾಟೆಗಳಾಗುತ್ತಿವೆ. ಪುಂಡರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ. ವಯೋವೃದ್ಧರು ಬೆಳಗಿನ ವೇಳೆ ವಾಕ್ ಮಾಡಲು ಬರುವಾಗ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ವೇಗವಾಗಿ ಬೈಕ್ ಚಲಾಯಿಸಿಕೊಂಡು ಕ್ರೀಡಾಂಗಣಕ್ಕೆ ನುಗ್ಗುತ್ತಿದ್ದಾರೆ” ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದರು.
ಆಯೋಜಕರ ನಿರ್ಲಕ್ಷ್ಯ ಹಾಗೂ ಪೊಲೀಸರನ್ನು ನಿಯೋಜಿಸದಿರುವುದೇ ಗಲಾಟೆಗಳ ಪ್ರಮುಖ ಕಾರಣ ಎಂದು ಸಾರ್ವಜನಿಕರು ಆರೋಪಿಸಿ, ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.










