ಅರಕಲಗೂಡು: ಸೆ. 21ರಂದು ಹಾಸನದಲ್ಲಿ ಬಸವಣ್ಣನವರ ಸಾಂಸ್ಕೃತಿಕ ಅಭಿಯಾನ – ಭಕ್ತರಿಗೆ ಸ್ವಾಮೀಜಿಗಳ ಮನವಿ

ಅರಕಲಗೂಡು: ವಿಶ್ವಕ್ಕೆ ಮಾನವತ್ವದ ಸಂದೇಶ ಸಾರಿದ ಜಗಜ್ಯೋತಿ ಬಸವೇಶ್ವರರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಮನವಿ ಮಾಡಿದರು.

ಪಟ್ಟಣದ ದೊಡ್ಡ ಮಠದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವೀರಶೈವ ಸಮಾಜದ ಮಠಾಧೀಶರು ಹಾಗೂ ಮುಖಂಡರ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ವಿಶ್ವಗುರು ಜಗಜ್ಯೋತಿ ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಒಂದು ವರ್ಷ ಪೂರೈಸಿದೆ.

ಈ ಘೋಷಣೆ ಇಡೀ ಮಾನವ ಕುಲಕ್ಕೂ ಹಾಗೂ ಸಮಾಜಕ್ಕೂ ಹೆಮ್ಮೆಯ ವಿಚಾರವಾಗಿದೆ, ಅವರು 12ನೇ ಶತಮಾನದಲ್ಲಿ ಹಾಕಿಕೊಟ್ಟಂತಹ ಮಾದರಿಯಲ್ಲೇ ಈಗಿನ ಸರ್ಕಾರಗಳು ಮುನ್ನಡೆಯಲು ಸಹಕಾರಿಯಾಗಿದೆ. ಇದನ್ನು ಹೆಚ್ಚು ಜನಪರವಾಗಿ ಪ್ರಯೋಜನಕಾರಿಯಾಗಿ ಅನುಷ್ಠಾನಕ್ಕೆ ತಂದಾಗ ಸಮಾಜದಲ್ಲಿ ಹೆಚ್ಚಿನ ಸುಧಾರಣೆಯನ್ನು ಕಾಣಲು ಸಾಧ್ಯ. ಕಾಯಕ ತತ್ವದ ಬಸವಣ್ಣನವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕು. ಈ ನಿಟ್ಟಿನಲ್ಲಿ ಸೆ. 21ರಂದು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬಸವಣ್ಣನವರ ಸಾಂಸ್ಕೃತಿಕ ಅಭಿಯಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಹಳೆಬೀಡು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸೆ. 1ರಂದು ಪ್ರಾರಂಭವಾದ ಬಸವ ಜ್ಯೋತಿ ರಥಯಾತ್ರೆ 21ರಂದು ಚಿಕ್ಕಮಗಳೂರಿನಿಂದ ಹಾಸನಕ್ಕೆ ಬರುತ್ತಿದ್ದು ಜಿಲ್ಲಾಧಿಕಾರಿ ಕಚೇರಿಯಿಂದ ಹಾಸನಾಂಬ ಕಲಾಕ್ಷೇತ್ರದವರೆಗೆ ಮೆರವಣಿಗೆ ಸಾಗಲಿದೆ. ನಂತರ ಪ್ರಮುಖ ಸ್ವಾಮೀಜಿಗಳು ಹಾಗೂ ಬಸವಣ್ಣನವರ ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಅರಕಲಗೂಡಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ತೇಜೂರು ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ತಣ್ಣೀರು ಹಳ್ಳದ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಅಖಲಿ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ನವಿಎ ಪರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಯುವ ಘಟಕದ ಅಧ್ಯಕ್ಷ ಚಂದ್ರಶೇಖರ್, ಪಪಂ ಮಾಜಿ ಅಧ್ಯಕ್ಷ ಲೋಕೇಶ್, ಮುಖಂಡರಾದ ಶಿವಣ್ಣ, ಪಂಚಾಕ್ಷರಿ, ವಿರೂಪಾಕ್ಷ, ಈರೇಗೌಡ, ಜಗದೀಶ, ಸುಂದ್ರೇಶ್, ವೇದಮೂರ್ತಿ, ಹೊಂಡರವಳ್ಳಿ ಲೋಕೇಶ್, ವಿಜಕುಮಾರ್, ಕಿರಣ್ ಕಮಲಮ್ಮ, ಸವಿತಾ, ನಿರ್ವಾಣಪ್ಪ ಇತರರು ಇದ್ದರು.