ಹಾಸನ: ತಂದೆ ನಿಧನ ನಂತರ ಅವರ ಕೆಲಸವನ್ನು ಅನುಕಂಪದ ಮೇಲೆ ಗಿಟ್ಟಿಸಿ ಹಾಲಿ ಕಟ್ಟಾಯ ವಿಭಾಗದ ಉಪ ತಹಸೀಲ್ದಾರ್ ಆಗಿರುವ ಕುಮಾರಸ್ವಾಮಿ ಹೆಚ್.ಎನ್. ಎಂಬುವರು ನಮಗೆ ಆಶ್ರಯ ಕೊಡದೆ ಕೊಡಬಾರದ ಚಿತ್ರಹಿಂಸೆ ಕೊಡುತ್ತಿದ್ದಾರೆ ಎಂದು ಅವರ ತಾಯಿ ಪದ್ಮಮ್ಮ, ಸಹೋದರಿ ಗೀತಾ ಅಳಲು ತೋಡಿಕೊಂಡರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ತಂದೆಯ ಹೆಸರಿನಲ್ಲಿದ್ದ ೪ ಎಕರೆ ಜಮೀನನ್ನೂ ಹಂತ ಹಂತವಾಗಿ ಮಾರಾಟ ಮಾಡಿ, ನಗರದ ವಿದ್ಯಾನಗರದಲ್ಲಿ ದೊಡ್ಡ ಮನೆ ಕಟ್ಟಿದ್ದಾನೆ. ಆದರೆ ಅಲ್ಲಿ ಇರಲು ನಮಗೆ ಅವಕಾಶ ನೀಡಿಲ್ಲ. ನಾವೀಗ ಪಿಜಿಯಲ್ಲಿದ್ದೇವೆ ಎಂದರು.
ನಮಗೆ ಜೀವ ಬೆದರಿಕೆ ಹಾಕಿ ಆಸ್ತಿ, ಹಣ ಎಲ್ಲವನ್ನೂ ಪಡೆದಿರುವ ಕುಮಾರಸ್ವಾಮಿ, ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ. ತಾಯಿಗೆ ಕೈ ಮುರಿದರೂ ಬಂದು ನೋಡಿಲ್ಲ. ಮನೆಗೆ ಹೋದರೆ ಪತ್ನಿ ಹಾಗೂ ಸಂಬಂಧಿಕರಿಂದ ಹಲ್ಲೆ ಮಾಡಿಸುತ್ತಾನೆ ಎಂದು ದೂರಿದರು.
ಆಸ್ಪತ್ರೆಯಿಂದ ಫೋನ್ ಮಾಡಿದ್ರೆ, ಅವರು ನನ್ನ ತಾಯಿ ಅಲ್ಲ ಎಂದು ನಿಕೃಷ್ಟವಾಗಿ ಹೇಳಿದ್ದಾನೆ. ಪಿತೃಪಕ್ಷಕ್ಕೆ ಬರುತ್ತಾರೆ ಎಂದು ಮೊದಲೇ ಹಬ್ಬ ಮುಗಿಸುತ್ತಾರೆ. ನೆಲ ಅಂತಸ್ತಿನ ಮನೆಯನ್ನು ಬಾಡಿಗೆ ನೀಡಿದ್ದಾನೆ. ಆದರೆ ನಾವು ಇರಲು ಕೊಡುತ್ತಿಲ್ಲ. ಆತ ಡೂಪ್ಲೆಕ್ಸ್ ಮನೆ ಕಟ್ಟಿಕೊಂಡು ಸುಖವಾಗಿದ್ದಾನೆ. ಸಾಕಷ್ಟು ಆಸ್ತಿ ಮಾಡಿದ್ದಾನೆ. ನಾವು ಯಾರ ಬಳಿಗೆ ಹೋದರೂ ಇಲ್ಲದ ಸುಳ್ಳು ಹೇಳಿಯೋ, ಅಧಿಕಾರಿಗಳು, ಪೊಲೀಸರಿಗೆ ಆಮಿಷವೊಡ್ಡಿ ನಮಗೆ ಮೋಸ ಮಾಡುತ್ತಾ ಬಂದಿದ್ದಾನೆ ಎಂದು ಆರೋಪಿಸಿದರು.










