ಹಾಸನ: ಒಳ ಮೀಸಲಾತಿಗಾಗಿ ಸ್ಪೃಶ್ಯ ಜಾತಿಗಳೊಂದಿಗೆ ಸೇರಿಸಿರುವ ೫೯ ಅಲೆಮಾರಿ ಸಮುದಾಯಗಳನ್ನು ಅವರುಗಳಿಂದ ಬೇರ್ಪಡಿಸಿ ಶೇ.೧ ರಷ್ಟು ಮೀಸಲಾತಿಯನ್ನು ಪ್ರತ್ಯೇಕವಾಗಿ ನಿಗದಿ ಪಡಿಸಬೇಕೆಂದು ಕರ್ನಾಟಕ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಎಂ.ಟಿ.ವೆಂಕಟೇಶ್ ಒತ್ತಾಯಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಲೆಮಾರಿ ಸಮುದಾಯವನ್ನು ಪ್ರವರ್ಗ ಸಿ ಗೆ ಸೇರಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸಚಿವ ಸಂಪುಟ ತೆಗೆದುಕೊಂಡಿರುವ ತೀರ್ಮಾನದಂತೆ ಪ್ರವರ್ಗ-೧, ಎರಡರಲ್ಲಿರುವ ಸಮುದಾಯಗಳಾದ ಮಾದಿಗ ಮತ್ತು ಛಲವಾದಿಯವರು ಆದಿ ಆಂಧ್ರ, ಆದಿ ಕರ್ನಾಟಕ ಮತ್ತು ಆದಿದ್ರಾವಿಡ ಜಾತಿ ಸೂಚಕ ಪಸದದ ಮೇಲೆ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುವುದರಿಂದ ಈಗಾಗಲೇ ಸರ್ಕಾರ ನೀಡಿರುವ ಜಾತಿ ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿ, ತಮ್ಮಗಳ ಮೂಲ ಜಾತಿ ಹೆಸರಿನ ಪ್ರಮಾಣ ಪತ್ರ ಪರಿಷ್ಕರಿಸುವ ಮೂಲ ಜಾತಿ ಪ್ರಮಾಣ ಪತ್ರವನ್ನು ಪಡೆಯುವಂತೆ ಸೂಕ್ತ ಸುತ್ತೋಲೆ ಹೊರಡಿಸುವಂತೆ ಕೋರಿದರು.
ಮಾದಿಗ ಅದರ ಸಂಬಂಧಿತ ಸಮುದಾಯಗಳಿಗೆ ಇದುವರೆಗೂ ಸರ್ಕಾರಿ ಉದ್ಯೋಗಗಳಲ್ಲಿ, ನೇಮಕಾತಿಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಲು ಬ್ಯಾಕ್‌ಲಾಗ್ ಹುದ್ದೆಗಳನ್ನು ಗುರುತಿಸಿ ಕೂಡಲೇ ಪ್ರತ್ಯೇಕವಾಗಿ ನೇಮಕ ಮಾಡಲು ಸೂಕ್ತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಮುಂದಿನ ಬಜೆಟ್‌ನಲ್ಲಿ ಶೇ.೬ ರಷ್ಟು ಅನುದಾನವನ್ನು ಪ್ರವರ್ಗ ಎ ವರ್ಗಗಳ ಸಮುದಾಯಗಳ ಅಭಿವೃದ್ಧಿಗೆ ಕಾಯ್ದಿರಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಲೋಕೇಶ್, ಗೌರವ ಅಧ್ಯಕ್ಷ ಶೇಖರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್, ಸಿದ್ದೇಶ್ ಇದ್ದರು.










