ಚನ್ನರಾಯಪಟ್ಟಣ: ಹಿರೀಸಾವೆ ಹೋಬಳಿಗೆ ಸಮಪರ್ಕವಾಗಿ ಯೂರಿಯಾ ಗೊಬ್ಬರವನ್ನು ಸರಬರಾಜು ಮಾಡುತ್ತಿಲ್ಲ ಎಂದು ಸೋಮವಾರ ರೈತ ಸಂಘದ ಕಾರ್ಯಕರ್ತರು ಹಿರೀಸಾವೆ ರೈತ ಸಂಪರ್ಕ ಕೇಂದ್ರ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಎಚ್.ಕೆ. ರಘು ನೇತೃತ್ವದಲ್ಲಿ ಕೃಷಿ ಇಲಾಖೆಯ ವಿರುದ್ದ ಘೋಷಣೆಗಳನ್ನು ಕೂಗಿದರು. ಕೃಷಿ ಅಧಿಕಾರಿಗಳಿಗೆ ಧರಣಿ ಮಾಡವುದಾಗಿ ಎರಡು ದಿನದ ಹಿಂದೆ ಮಾಹಿತಿ ನೀಡಿದ್ದರು, ಸರಿಯಾದ ಸಮಯಕ್ಕೆ ಅಧಿಕಾರಿಗಳ ಬಂದಿಲ್ಲ ಎಂದು ಆಕ್ರೋಶಗೊಂಡ ರೈತರು, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳುನ್ನು ಹೊರಕ್ಕೆ ಕಳುಹಿಸಿ, ಬಾಗಿಲು ಹಾಕಿ ಧರಣಿಯನ್ನು ಮುಂದುವರಿಸಿದರು. ನಂತರ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಮೋಹನ ಕುಮಾರ್ ಆಗಮಿಸಿ, ರೈತರಿಂದ ಯೂರಿಯಾ ಸಮಸ್ಯೆ ಆಲಿಸಿ, ಕಚೇರಿಯ ಬಾಗಿಲು ತೆರೆಸಿದರು.
ಎಚ್.ಕೆ. ರಘು ಮಾತನಾಡಿ, ಹೋಬಳಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಯೂರಿಯಾ ಸಿಗುತ್ತಿಲ್ಲ, ಅಂಗಡಿಯವರು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ ಮತ್ತು ರಶೀದಿಯನ್ನು ನೀಡುತ್ತಿಲ್ಲ. ಯೂರಿಯ ಜೊತೆ ಇತರೆ ರಸ ಗಬ್ಬರವನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು, ಆ ಗೊಬ್ಬರಕ್ಕೆ ಸಾವಿರಾರು ಹಣ ನೀಡಬೇಕಿದೆ. ರೈತರಿಗೆ ಬೇಕಾದ ಯೂರಿಯಾ ಕೊಡುತ್ತಿಲ್ಲ. ಸಹಕಾರ ಸಂಘಗಳಿಗೆ ಹೆಚ್ಚು ಸರಬರಾಜು ಮಾಡುವಂತೆ ಒತ್ತಾಯಿಸಿದರು.
ಕೃಷಿ ಅಧಿಕಾರಿ ಮಾತನಾಡಿ, ಕೆಲವು ಸಹಕಾರ ಸಂಘದವರು ಸರ್ಕಾರದ ನಿಯಮಾನುಸಾರ ಮತ್ತು ಡೀಲರ್ ಗಳಿಂದ ಸಬ್ ಡೀಲರ್ ಸಿಪ್ ತೆಗೆದುಕೊಂಡಿಲ್ಲ ಇದರಿಂದ ಕೊರತೆಯಾಗಿದೆ, ಸಬ್ ಡೀಲರ್ ಸಿಪ್ ಪಡೆದರೆ, ಹೆಚ್ಚು ಯೂರಿಯಾ ಸರಬರಾಜು ಆಗುತ್ತದೆ ಎಂದು ಹೇಳಿದರು.
ಹಿರೀಸಾವೆ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಮಾತನಾಡಿ ಫೇಡರೇಷನ್ ನಿಂದ ಯೂರಿಯಾ ತರಿಸುತ್ತಿವೆ. ಇಲ್ಲಿ ಹೆಚ್ಚು ಯೂರಿಯಾ ಬೇಡಿಕೆ ಇದೆ, ಆದರೆ ಡಿಎಪಿ, 20–20 ಸೇರಿದಂತೆ ಇತರೆ ಗೊಬ್ಬರವನ್ನು ಲಿಂಕ್ ಆಗಿ ಸರಬಾರಜು ಆಗುತ್ತಿದ್ದೆ, ನಮ್ಮಲ್ಲಿ ಇತರೆ ಗೊಬ್ಬರ ದಾಸ್ತಾನು ಇದೆ, 3 ಲೋಡ್ ಯೂರಿಯಾ ಮಾತ್ರ ನೀಡುವಂತೆ ಕೇಳಿದರು.
ಜಿಲ್ಲಾ ಗೌರ ಅಧ್ಯಕ್ಷ ಮೂಡ್ಲಿಗೌಡರು, ರೈತರ ಸಂಘದ ಹೋಬಳಿ ಅಧ್ಯಕ್ಷ ಅಂತನಹಳ್ಳಿ ಅಣ್ಣಪ್ಪಸ್ವಾಮಿ, ಸದಸ್ಯರಾದ ಮೇಟಿಕೆರೆ ಚಂದ್ರು, ಹೊನ್ನೇನಹಳ್ಳಿ ಶಿವರಾಮೇಗೌಡ, ಮಂಜಣ್ಣ, ತೂಬಿನಕೆರ ಶಂಕರ್ ಮತ್ತಿತರರು ಸಮಸ್ಯೆ ಬಗ್ಗೆ ಮಾತನಾಡಿದರು.










