ಚಿಕ್ಕಮಗಳೂರು : ಗೌರಿ ಮತ್ತು ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಆಗಸ್ಟ್ 26 ಮತ್ತು 27 ರಂದು ಮುಳ್ಳಯ್ಯನಗಿರಿ–ಸೀತಾಳಯ್ಯನಗಿರಿ ಮಾರ್ಗದಲ್ಲಿ ಜನಸಂದಣಿ ಹಾಗೂ ವಾಹನ ದಟ್ಟಣೆ ಹೆಚ್ಚುವ ನಿರೀಕ್ಷೆಯಿದ್ದು, ಅಪಘಾತ ಸಂಭವಿಸುವ ಸಾಧ್ಯತೆ ಇರುವುದರಿಂದ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡಿಕೊಳ್ಳುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಪ್ರತಿ ವರ್ಷ ಈ ಹಬ್ಬದ ಸಂದರ್ಭದಲ್ಲಿ ಕಸಬಾ, ವಸ್ತಾರೆ, ಆವತಿ, ಅಂಬಳೆ ಹಾಗೂ ಜಾಗರ ಹೋಬಳಿಯ 40ಕ್ಕೂ ಹೆಚ್ಚು ಗ್ರಾಮಸ್ಥರು ಶ್ರೀ ಮುಳ್ಳಯ್ಯನಗಿರಿ, ಶ್ರೀ ಸೀತಾಳಯ್ಯನಗಿರಿ ಮತ್ತು ಶ್ರೀ ಗುರು ನಾರುಕಂತಮಠಗಳಿಗೆ ತೆರಳಿ “ಚೌತಿ ಕಾಯಿ” ಒಡೆದು ಹಣ್ಣು-ಕಾಯಿ ಮಾಡಿಕೊಳ್ಳುವ ಪಾರಂಪರಿಕ ಆಚರಣೆ ನಡೆಸುತ್ತಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕ ರಜೆಯಿರುವುದರಿಂದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಐಡಿ ಪೀಠ, ಮಾಣಿಕ್ಯಧಾರ ಮುಂತಾದ ಪ್ರವಾಸಿತಾಣಗಳಿಗೆ ರಾಜ್ಯದ ವಿವಿಧೆಡೆಯಿಂದ ಹಾಗೂ ಹೊರರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ.
ಆದರೆ ಈ ಪ್ರದೇಶದ ರಸ್ತೆಗಳು ಕಿರಿದಾಗಿರುವುದರಿಂದ ಜನ ಹಾಗೂ ವಾಹನ ದಟ್ಟಣೆ ಉಂಟಾಗಿ ಅತಿಯಾದ ಸಂಚಾರದ ನಡುವೆ ಅಪಘಾತಗಳ ಸಂಭವ ಹೆಚ್ಚಾಗಬಹುದೆಂದು ಎಚ್ಚರಿಕೆ ನೀಡಿರುವ ಜಿಲ್ಲಾಡಳಿತ, “ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ಮುಂಗಡವಾಗಿ ಕೊಠಡಿ ಕಾಯ್ದಿರಿಸಿರುವ ಪ್ರವಾಸಿಗರನ್ನು ಹೊರತುಪಡಿಸಿ, ಇತರರು ಈ ದಿನಗಳಲ್ಲಿ ಪ್ರವಾಸ ಮುಂದೂಡಬೇಕು” ಎಂದು ಮನವಿ ಮಾಡಿದೆ.










