ಹಾಸನ: ನಗರದ ಜಯನಗರದ ಭಗತ್‌ಸಿಂಗ್ ರಸ್ತೆಯಲ್ಲಿಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಯುವ ಘಟಕದ ಕಚೇರಿಯನ್ನು ಉದ್ಘಾಟಿಸಲಾಯಿತು.ಗೌರವಾಧ್ಯಕ್ಷರಾದ ಅರಸೀಕೆರೆಯ ಹನುಮಪ್ಪ ಟೇಪ್ ಕತ್ತರಿಸಿ ಉದ್ಘಾಟಿಸಿದರು.
ಈ ವೇಳೆ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರವಿ ಕುಮಾರ್ ಬಿ.ಎಸ್, ಜಿಲ್ಲಾಧ್ಯಕ್ಷ ಎನ್.ಟಿ.ಶ್ರೀನಿವಾಸ್ ಮೊದಲಾದವರಿದ್ದರು.ಈ ವೇಳೆ ಮಾತನಾಡಿದ ರವಿಕುಮಾರ್, ನಾನು ಅರಸೀಕೆರೆ ವಾಲ್ಮೀಕಿ ನಾಯಕರ ಸಂಘದ ನಿರ್ದೇಶಕನಾಗಲು ಹೊರಟವನು, ತರುವಾಯ ಜಿಲ್ಲಾಧ್ಯಕ್ಷನಾದೆ. ನನ್ನ ಅವಧಿಯಲ್ಲಿ ಯಾವುದೇ ತಪ್ಪು ಮಾಡಿಲ್ಲ. ಶ್ರಮವಹಿಸಿ ಸ್ವಂತ ಹಣ ಖರ್ಚು ಮಾಡಿ ಸಂಘಟನೆ ಮಾಡಿದ್ದೇನೆ ಎಂದರು.
ಆಗ ಸಾಕಷ್ಟು ಮಂದಿ ನೋವು ಕೊಟ್ಟರು, ಆದರೀಗ ನನ್ನ ಸಂಘಟನಾ ಗುಣ ಗುರುತಿಸಿ ರಾಜ್ಯ ಉಪಾಧ್ಯಕ್ಷ ಜವಾಬ್ದಾರಿ ನೀಡಿದ್ದಾರೆ. ಈ ಮೂಲಕ ಸಮಾಜಕ್ಕೆ ನನ್ನ ಕೈಲಾದ ಸಹಾಯ ಮಾಡುವೆ ಎಂದರು. ಎಲ್ಲರ ಸಹಕಾರದಿಂದ ಮುಂದೆ ನಗರದಲ್ಲಿ ಸಮುದಾಯಕ್ಕೆ ಒಂದು ಸ್ವಂತ ಕಟ್ಟಡ ಮಾಡೋಣ ಎಂದರು.
ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಇಂದು ಸ್ವಯಂ ಘೋಷಿತ ಅಧ್ಯಕ್ಷರ ಕಾರುಬಾರು ಹೆಚ್ಚಾಗಿದೆ. ಅಂಥವರೂ ಸಮಾಜಮುಖಿ ಕೆಲಸ ಮಾಡಿದರೆ ನಮ್ಮ ತಕರಾರು ಇಲ್ಲ, ಆದರೆ ಸ್ವಾರ್ಥಕ್ಕಾಗಿ ಸಂಘಟನೆ ಬಳಸಿಕೊಳ್ಳಬಾರದು ಎಂದರು. ನಮ್ಮ ಸಂಘಟನೆ ರಾಜ್ಯಮಟ್ಟದಲ್ಲಿ ಬಲಿಷ್ಠ ಆಗುತ್ತಿದೆ. ಭವಿಷ್ಯದಲ್ಲಿ ಮತ್ತಷ್ಟು ಸಂಘಟನೆ ಮಾಡೋಣ ಎಂದರು.
ಹನುಮಪ್ಪ ಅವರು, ಸಂಘದಲ್ಲಿ ರಾಜಕೀಯ ಬೆರೆಸಬೇಕು. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಮೂಲಕ ಸಮಾಜಕ್ಕೆ ಅನುಕೂಲ ಮಾಡಿ ಎಂದರು. ಇದೇ ವೇಳೆ ಸಮುದಾಯದ ನಿವೃತ್ತ ಅಧಿಕಾರಿಗಳು, ನೌಕರರನ್ನು ಸನ್ಮಾನಿಸಲಾಯಿತು.
ಸಮುದಾಯದ ಜಯಣ್ಣ, ದೊಡ್ಡ ರಂಗಯ್ಯ, ಕೃಷ್ಣನಾಯಕ, ಜಯಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಬ್ರಿಗೇಡ್‌ನ ರಾಜೇಶ್ ಮೊದಲಾದವರಿದ್ದರು.










