ಸಕಲೇಶಪುರ: ತಾಲ್ಲೂಕಿನಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಬಳಕೆಗೆ ಮಾತ್ರ ಸರ್ಕಾರದಿಂದ ನಿಷೇಧವಿದ್ದು, ಧ್ವನಿವಧರ್ಕ ಬಳಕೆಗೆ ಯಾವುದೇ ರೀತಿಯ ನಿರ್ಬಂಧವಿಲ್ಲ ಎಂದು ಡಿವೈಎಸ್‌ಪಿ ಪ್ರಮೋದ್ ಕುಮಾರ್ ಹೇಳಿದರು.
ಪಟ್ಟಣದ ರೈತ ಭವನದಲ್ಲಿ ಗಣೇಶೋತ್ಸವ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿ ಆಯೋಜಕರ ಸಭೆಯಲ್ಲಿ ಮಾತನಾಡಿ, ಸರ್ಕಾರ ಅನುಮತಿಸದ ಡಿಜೆ ಹೊರತುಪಡಿಸಿ ಇತರ ಧ್ವನಿ ವರ್ಧಕ ಹಾಗೂ ವಾದ್ಯ ವೃಂದಗಳ ಮೂಲಕ ಉತ್ಸವ ಆಚರಿಸಿಕೊಳ್ಳಬಹುದು. ಇದಕ್ಕೆ ಪೊಲೀಸ್ ಇಲಾಖೆ ಯಾವುದೇ ಅಡಚಣೆ ಮಾಡುವುದಿಲ್ಲ. ಆದರೆ ಸರ್ಕಾರ ವಿಧಿಸಿರುವ ಮಾನದಂಡಗಳ ಪ್ರಕಾರವೇ ಅನುಮತಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಉತ್ಸವ ನಡೆಯುವ ಸ್ಥಳದಲ್ಲಿ ಆಯೋಜಕರು ಸ್ವತಃ ಮುಂಜಾಗ್ರತಾ ಕ್ರಮವಾಗಿ ಸಿಸಿ ಕ್ಯಾಮೆರಾ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಉತ್ಸವದ ಆವರಣದಲ್ಲಿ ಧ್ವನಿವರ್ಧಕ ಬಳಸಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಯಾವುದೇ ನಿಷೇಧವಿಲ್ಲ. ಆಚರಣೆಗಳು ನಮಗೆ ಸಂತೋಷ ನೀಡಬೇಕು ಹೊರತು ಇತರರಿಗೆ ತೊಂದರೆ ಉಂಟುಮಾಡಬಾರದು. ವಿಸರ್ಜನೆ ವೇಳೆ ಅನಾಹುತಗಳನ್ನು ತಪ್ಪಿಸಲು ಆಯೋಜಕರು ಸ್ವತಃ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಡಿಜೆ ಬಳಕೆಗೆ ಮಾತ್ರ ನಿಷೇಧವಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಡಿಜೆ ಬಳಕೆಗೆ ಅನುಮತಿ ನೀಡಿದರೆ ನಮಗೆ ಯಾವುದೇ ತಕರಾರು ಇರುವುದಿಲ್ಲ ಎಂದರು.
ನಗರ ಪೊಲೀಸ್ ಠಾಣೆ ಪಿಎಸ್‌ಐ ಮಹೇಶ್, ಗ್ರಾಮಾಂತರ ಠಾಣೆ ಪಿಎಸ್‌ಐ ಪ್ರಸನ್ನ, ಟಿಎಪಿಸಿಎಂಎಸ್ ಅಧ್ಯಕ್ಷ ಶಶಿಕುಮಾರ್, ಪಿಎಸ್‌ಐ ಸರ್ದಾರ್ ಪಾಷಾ, ಯಸಳೂರು ಪಿಎಸ್‌ಐ ಶ್ರೀನಿವಾಸ್, ಸೆಸ್ಕ್ ಸಹಾಯಕ ಅಭಿಯಂತರ ಹರೀಶ್, ಆನೆಮಹಲ್ ಗ್ರಾಪಂ ಪಿಡಿಒ ಹರೀಶ್ ಇತರರಿದ್ದರು.










