12.9 C
Munich
Home News ಧರ್ಮಸ್ಥಳ ಅಪಪ್ರಚಾರ ವಿರುದ್ಧ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಆಕ್ರೋಶ

ಧರ್ಮಸ್ಥಳ ಅಪಪ್ರಚಾರ ವಿರುದ್ಧ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಆಕ್ರೋಶ

ಸಕಲೇಶಪುರ : ಹಿಂದುಗಳ ಪವಿತ್ರ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಕೂಡಲೇ ನಿಲ್ಲಬೇಕೆಂದು ಯಲಹಂಕ ಶಾಸಕ ಎಸ್. ಆರ್ ವಿಶ್ವನಾಥ್ ಹೇಳಿದರು.

ನಾನೂರಕ್ಕು ಹೆಚ್ಚಿನ ಕಾರುಗಳಲ್ಲಿ ಯಲಹಂಕದಿಂದ ಧರ್ಮಸ್ಥಳ ಚಲೋ ಕಾರ್ಯಕ್ರಮದ ಅಂಗವಾಗಿ ಮಾರ್ಗ ಮಧ್ಯದಲ್ಲಿ ಪಟ್ಟಣದ ಬೈ ಪಾಸ್ ರಸ್ತೆ ಕೆಂಪೇಗೌಡ ಪ್ರತಿಮೆ ಸಮೀಪ ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ತಾಲೂಕು ಬಿಜೆಪಿ ಕಾರ್ಯಕರ್ತರ ಸ್ವಾಗತವನ್ನು ಸ್ವೀಕರಿಸಿ ಮಾತನಾಡಿ ಶ್ರೀ ಮಂಜುನಾಥ ಸ್ವಾಮಿಯ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರಿಗೆ ದೇವರು ಶಿಕ್ಷೆ ನೀಡಲಿ ಎಂದು ಹೇಳಿರುವ ಅವರು, ಸೋಮವಾರದ ವಿಧಾನಸಭಾ ಅಧಿವೇಶನದಲ್ಲಿ ಎಸ್‌ಐಟಿ ತನಿಖೆ ವರದಿಯನ್ನು ಮಂಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

“ಸೌಜನ್ಯ ಕೇಸ್ ತನಿಖೆಗೆ ನಮ್ಮ ಅಡ್ಡಿಯಿಲ್ಲ, ನಾವು ಸ್ವಾಗತಿಸುತ್ತೇವೆ. ಆದರೆ ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲಸವನ್ನು ವಿಚಾರವಾದಿಗಳು ಮತ್ತು ಧರ್ಮವಿರೋಧಿಗಳು ಮಾಡುತ್ತಿದ್ದಾರೆ. ಇದು ರಾಜ್ಯ ಮತ್ತು ದೇಶದ ಕೋಟ್ಯಾನುಕೋಟಿ ಭಕ್ತರ ಭಾವನೆಗೆ ಧಕ್ಕೆ ತರುವ ಕೃತ್ಯ,” ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಂಜುನಾಥ ಸ್ವಾಮಿಯ ವಿರುದ್ಧ ಅಪಪ್ರಚಾರ ಮಾಡುವವರಿಗೆ ಸರ್ಕಾರದ ಶಿಕ್ಷೆ ಒಂದೆಡೆಯಾದರೆ, ದೇವರ ಶಿಕ್ಷೆ ಮತ್ತೊಂದೆಡೆ,” ಎಂದು ಹೇಳಿದ್ದಾರೆ.

ಅನಾಮಿಕ ವ್ಯಕ್ತಿಯ ದೂರಿನ ಆಧಾರದ ಮೇಲೆ ಎಸ್‌ಐಟಿ ಉತ್ಖನನ ನಡೆಸಿರುವುದನ್ನು ಟೀಕಿಸಿರುವ ಶಾಸಕರು, “ಅನಾಮಿಕನ ಮಾತಿಗೆ ಕಿವಿಗೊಟ್ಟು ತಪ್ಪು ಮಾಡಿದ್ದೇವೆ ಎಂದು ಸರ್ಕಾರಕ್ಕೆ ಈಗ ಅನಿಸಿರಬಹುದು. ಹದಿಮೂರನೇ ಪಾಯಿಂಟ್‌ನಲ್ಲಿ ಏನೂ ಸಿಗಲಿಲ್ಲ. ಇಂತಹ ದೂರಿನ ಆಧಾರದಲ್ಲಿ ಇಡೀ ಧರ್ಮಸ್ಥಳವನ್ನೇ ಅಗೆಯಬೇಕೇ? ವಿಧಾನಸೌಧ ಕಟ್ಟುವಾಗ ಯಾರನ್ನಾದರೂ ಕೊಂದು ಸ್ಪೀಕರ್ ಕುರ್ಚಿಯ ಕೆಳಗೆ ಹೂತಿದ್ದೇವೆ ಎಂದರೆ ಅಗೆಯಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ.

“ಅನಾಮಿಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಸುಳ್ಳು ಹೇಳಿದ್ದರೆ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿರುವ ವಿಶ್ವನಾಥ್, ಲಾಯರ್ ಜಗದೀಶ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಅವರ ಹೆಸರು ಹೇಳಲು ಅಸಹ್ಯವಾಗುತ್ತದೆ. ಇಂತಹ ಹುಚ್ಚುನಾಯಿಗಳನ್ನು ಸುಮ್ಮನೆ ಬಿಡಲಾಗದು. ಧರ್ಮಸ್ಥಳಕ್ಕೆ ನಾವು ಭಕ್ತಿಯಿಂದ ಹೋದರೆ ಇವರಿಗೇನು? ಬುದ್ಧಿ ಕಲಿಸುವುದು ನಮಗೆ ಗೊತ್ತು,” ಎಂದು ಎಚ್ಚರಿಕೆ ನೀಡಿದ್ದಾರೆ.

ತಮ್ಮ ವಿರುದ್ಧವೂ ಅಪಪ್ರಚಾರ ನಡೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಶಾಸಕರು, “ನನ್ನ ಹಕ್ಕುಗಳಿಗೆ ಚ್ಯುತಿಯಾಗುತ್ತಿದೆ. ಈ ಬಗ್ಗೆ ಸೋಮವಾರ ಅಧಿವೇಶನದಲ್ಲಿ ಹಕ್ಕುಚ್ಯುತಿ ಪ್ರಸ್ತಾಪ ಮಂಡಿಸುತ್ತೇನೆ,” ಎಂದು ತಿಳಿಸಿದ್ದಾರೆ.

“ನಾಳೆಯಿಂದ ಧರ್ಮಸ್ಥಳಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಕ್ಷೇತ್ರವನ್ನು ತುಂಬಿ ತುಳುಕಬೇಕು. ಜನರು ದೇವರ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಬಾರದು,” ಎಂದು ವಿಶ್ವನಾಥ್ ಮನವಿ ಮಾಡಿದ್ದಾರೆ.

ಈ ಹೇಳಿಕೆಯು ಧರ್ಮಸ್ಥಳದ ಘನತೆಯನ್ನು ಎತ್ತಿಹಿಡಿಯುವ ಜೊತೆಗೆ, ಎಸ್‌ಐಟಿ ತನಿಖೆಯ ವರದಿಯನ್ನು ಶೀಘ್ರವಾಗಿ ಮಂಡಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಉದ್ದೇಶವನ್ನು ಹೊಂದಿದೆ.

ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜು ಮಾತನಾಡಿ ಯಲಹಂಕ ಶಾಸಕ ಬೆಂಗಳೂರಿನಿಂದ 400ಕ್ಕೂ ಹೆಚ್ಚು ಕಾರುಗಳಲ್ಲಿ ಧರ್ಮಸ್ಥಳಕ್ಕೆ ಹೋಗುತ್ತಿರುವುದು ಅತ್ಯಂತ ಶ್ಲಾಘನೀಯ, ಈಗಾಗಲೇ ನಾನು ಕಳೆದ ವಾರ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದೇನೆ. ಧರ್ಮಸ್ಥಳದ ಮೇಲೆ ಅಪಪ್ರಚಾರ ಖಂಡನಿಯ, ಸೌಜನ್ಯ ಹತ್ಯೆಗೆ ನ್ಯಾಯ ದೊರಕಬೇಕೆಂಬುದು ನನ್ನ ಆಸೆ, ಆದರೆ ಸೌಜನ್ಯ ಹೆಸರಿನಲ್ಲಿ ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡಿ ಹಿಂದುಗಳ ಭಾವನೆಗೆ ದಕ್ಕೆ ತರುವುದು ಎಷ್ಟ್ಟು ಸರಿ? ಬಿಜೆಪಿಯ ರಾಜ್ಯದ ವಿಜಯೇಂದ್ರ ರವರ ನೇತೃತ್ವದಲ್ಲಿ ನಾಳೆ ಹಲವಾರು ಮುಖಂಡರು ಶಾಸಕರು ಧರ್ಮಸ್ಥಳಕ್ಕೆ ತೆರಳುತ್ತಿದ್ದು ನಾನು ಸಹ ನಾಳೆ ಧರ್ಮಸ್ಥಳಕ್ಕೆ ಭೇಟಿ ಕೊಡುತ್ತೇನೆ ಎಂದರು.

ಶ್ರೀ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್, ನಗರಾಧ್ಯಕ್ಷ ದಿಂಬು ಲೋಕೇಶ್, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಕಾಮನಹಳ್ಳಿ ರಾಜಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಿಖಿಲ್, ಪಕ್ಷದ ಮುಖಂಡರಾದ ಜಯಶಂಕರ್, ನವೀನ್ ಶೆಟ್ಟಿ, ಆಕಾಶ್ ಹಳ್ಳಿಗದ್ದೆ, ಲೋಕೇಶ್ ಬಾಳೆಗದ್ದೆ,ಸಂದೀಪ್,ಪ್ರವೀಣ್ ಪೈಂಟ್ ಮುಂತಾದವರು ಹಾಜರಿದ್ದರು.

error: Content is protected !!