ಸಂಪುಟದಿಂದ ರಾಜಣ್ಣ ವಜಾ ಖಂಡಿಸಿ ಸೋಮವಾರ ವಾಲ್ಮೀಕಿ-ದಲಿತ ಸಂಘಟನೆಗಳಿಂದ ಹಾಸನದಲ್ಲಿ ಪ್ರತಿಭಟನೆ

ಹಾಸನ: ಮಾಜಿ ಸಚಿವ, ವಾಲ್ಮೀಕಿ ಸಮುದಾಯದ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾ ಮಾಡಿರುವುದನ್ನು ಖಂಡಿಸಿ ಆ.೧೮ ರಂದು ಜಿಲ್ಲಾ ವಾಲ್ಮೀಕಿ ಸಮಾಜ ಹಾಗೂ ಹಲವು ದಲಿತಪರ ಸಂಘಟನೆಗಳಿಂದ ಪ್ರತಿಭಟನೆ ಹಾಗೂ ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ ೧೦ ಘಂಟೆಗೆ ನಗರದ ಹೇಮಾವತಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ

ರಾಜಣ್ಣ ಅವರ ವ್ಯಕ್ತಿತ್ವ, ನಿಷ್ಠೂರ ನಡೆ-ನುಡಿ, ಏಳಿಗೆ, ಅವರ ಜನಪರ ಕಾಳಜಿ ಸಹಿಸದೆ ಯಾರದೋ ಮಾತು ಕೇಳಿ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿರುವುದನ್ನು ಈಗಾಗಲೇ ಖಂಡಿಸಿದ್ದೇವೆ, ಮುಂದೆಯೂ ಖಂಡಿಸುತ್ತೇವೆ ಎಂದು ಸಮುದಾಯದ ಮುಖಂಡರು ತಿಳಿಸಿದ್ದಾರೆ.

ರಾಜಣ್ಣ ಅವರು ಕ್ಷಮಿಸಲಾರದಂತಹ ತಪ್ಪೇನು ಮಾಡಿಲ್ಲ, ಪಕ್ಷದ ಯಾರೇ ಆಗಲಿ ಒಂದು ಮಾತು ಹೇಳಿದ್ದರೆ ಅವರು ತಿದ್ದುಕೊಳ್ಳುತ್ತಿದ್ದರು. ಅದನ್ನು ಬಿಟ್ಟು ಸಂಪುಟದಿಂದ ಕೈಬಿಟ್ಟಿರುವುದು ಸರಿಯಾದ ಕ್ರಮವಲ್ಲ. ಕೂಡಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ನಾಯಕರಿಗೆ ಸೂಚನೆ ನೀಡಿ, ರಾಜಣ್ಣ ಅವರನ್ನು ಮರಳಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸಿದ್ದಾರೆ.