ಸಕಲೇಶಪುರ: ತಾಲ್ಲೂಕಿನ ಕರಗೂರು ಕೂಡಿಗೆ ಗ್ರಾಮದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ 16 ಅಡಿ ಎತ್ತರದ ಏಕಶಿಲಾ ಆಂಜನೇಯ ಮೂರ್ತಿಯನ್ನು ಸೋಮವಾರ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ತಮಿಳುನಾಡಿನ ಸೇಲಂನಲ್ಲಿ ಸಿದ್ಧಪಡಿಸಲಾದ ಮೂರ್ತಿಯು ಬೆಂಗಳೂರು, ಚನ್ನರಾಯಪಟ್ಟಣ, ಹಾಸನ, ಬಾಳ್ಳುಪೇಟೆ, ಸಕಲೇಶಪುರ, ಹೆತ್ತೂರು, ವನಗೂರು ಮಾರ್ಗವಾಗಿ ಕರಗೂರು ತಲುಪಿದೆ. ಹಾಸನದಲ್ಲಿ ಶಾಸಕ ಸಿಮೆಂಟ್ ಮಂಜು ಮೂರ್ತಿಗೆ ಪೂಜೆ ಸಲ್ಲಿಸಿದರು.
ಬೆಳಿಗ್ಗೆ ಬಾಳ್ಳುಪೇಟೆಯಲ್ಲಿ ನಾಗರಿಕರು ಮೂರ್ತಿಯನ್ನು ಬರಮಾಡಿಕೊಂಡರು. ಬಳಿಕ ಪಟ್ಟಣದ ಆಂಜನೇಯಸ್ವಾಮಿ ದೇವಸ್ಥಾನ ಸಮೀಪ ಬಿಜೆಪಿ ಹಾಗು ಹಿಂದೂಪರ ಸಂಘಟನೆಗಳ ಮುಖಂಡರು ಅದ್ದೂರಿಯಾಗಿ ಸ್ವಾಗತಿಸಿದರು. ಮುಖ್ಯ ಬೀದಿಯಲ್ಲಿ ನಾದಸ್ವರ, ಜಾನಪದ ವಾದ್ಯಗಳ ಮೇಳದೊಂದಿಗೆ ಮೆರವಣಿಗೆ ನಡೆಸಿ ಬೀಳ್ಕೊಡಲಾಯಿತು.
ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್, ವಾಯುಪುತ್ರ ಸೇವಾ ಸಮಿತಿಯ ತೇಜಸ್ವಿ (ವಾಲೆ ಮಂಜು) ರಮೇಶ್, ಹರೀಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ವಳಲಹಳ್ಳಿ ಅಶ್ವಥ್, ನಂದನ್, ಮಂಜುನಾಥ್ ಸಂಘಿ, ರಘು ಚಂಪಕನಗರ, ಜಯಶಂಕರ್, ಮಹೇಂದ್ರ, ವಿಷ್ಣು ಇತರರಿದ್ದರು.










