ಗೊರೂರು : ಶಾಲೆ ಉಳಿಸಲು ಎಂತಹ ಹೋರಾಟಕ್ಕಾದರೂ ಸಿದ್ಧ – ಗೊರೂರಿನ ಅಂಬೇಡ್ಕರ್ ನಗರದ ಗ್ರಾಮಸ್ಥರು

📍 ಗೊರೂರು | 14 ಫೆಬ್ರವರಿ 2026: ಗೊರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಬೇಡ್ಕರ್ ನಗರದ ಎ.ಕೆ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಗೊರೂರಿನ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ವಿಲೀನಗೊಳಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ AIDSO ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯಲ್ಲಿ 30ಕ್ಕೂ ಹೆಚ್ಚು ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.


“ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ” – ಜಿಲ್ಲಾ ಅಧ್ಯಕ್ಷೆ ಚೈತ್ರ

ಜಿಲ್ಲಾಧ್ಯಕ್ಷೆ ಚೈತ್ರ ಮಾತನಾಡಿ, ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.

ಹಾಸನ ಜಿಲ್ಲೆಯ 12ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಈ ಕ್ರಮದ ವಿರುದ್ಧ ಹೋರಾಟಗಳು ನಡೆದಿವೆ ಎಂದು ತಿಳಿಸಿದರು.

“ಅಂಬೇಡ್ಕರ್ ನಗರದ ಸರ್ಕಾರಿ ಶಾಲೆಯನ್ನು ಮುಚ್ಚಲು ಹೊರಟಿರುವ ಸರ್ಕಾರದ ನಡೆಯ ವಿರುದ್ಧ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಶಿಕ್ಷಣವನ್ನು ಖಾಸಗೀಕರಣಗೊಳಿಸುವ ನೀತಿಗಳಿಗೆ ಜನರ ಏಕತೆ ಮಾತ್ರ ಉತ್ತರ” ಎಂದು ಅವರು ಹೇಳಿದರು.


🏫 “ನಮ್ಮೂರ ಶಾಲೆ ನಮ್ಮ ಹೆಮ್ಮೆ” – ನರಸಿಂಹನ್

ಊರಿನ ಹಿರಿಯರು ಹಾಗೂ ಶಾಲೆ ಉಳಿಸಿ ಸಮಿತಿಯ ಅಧ್ಯಕ್ಷರು, ವಿಶ್ರಾಂತ ಮುಖ್ಯೋಪಾಧ್ಯಾಯರಾದ ನರಸಿಂಹನ್ ಮಾತನಾಡಿ,

“ನಮ್ಮ ಊರಲ್ಲಿ ಸರ್ಕಾರಿ ಶಾಲೆ ಇರುವುದು ನಮ್ಮ ಹೆಮ್ಮೆ. ಮಕ್ಕಳು ಯೂನಿಫಾರ್ಮ್ ಧರಿಸಿ ಶಾಲೆಗೆ ಹೋಗುವುದೇ ಊರಿಗೆ ಕಳೆ. ಯಾವುದೇ ಕಾರಣಕ್ಕೂ ಈ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ. ಶಾಲೆ ಉಳಿಸಲು ಎಂತಹ ಹೋರಾಟಕ್ಕಾದರೂ ಸಿದ್ಧ” ಎಂದು ಆಕ್ರೋಶ ವ್ಯಕ್ತಪಡಿಸಿದರು.


📚 ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಬಗ್ಗೆ ಆತಂಕ

ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಿಂದ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚು ಎಂದು ಹೇಳಿದರು.

ಒಂದರಿಂದ ಐದನೇ ತರಗತಿವರೆಗೆ ಶಾಲೆಗಳು ಆ ಊರಿನಲ್ಲೇ ಸರ್ಕಾರಿ ಶಾಲೆಗಳಾಗಿ ನಡೆಯಬೇಕು. ಸಣ್ಣ ಮಕ್ಕಳಿಗೆ ದೂರ ಪ್ರಯಾಣ ಸಾಧ್ಯವಿಲ್ಲ. ಪೋಷಕರಿಗೂ ಪ್ರತಿದಿನ ಕರೆದುಕೊಂಡು ಹೋಗುವುದು ಕಷ್ಟಕರ ಎಂದು ಹೇಳಿದರು.


👥 ಪ್ರತಿಭಟನೆಯಲ್ಲಿ ಭಾಗವಹಿಸಿದವರು

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಅಭಿಷೇಕ್, ಗ್ರಾಮಸ್ಥರಾದ ನರಸಿಂಹನ್, ಮಹೇಂದ್ರ, ಮಂಜುನಾಥ್, ದಿವಾಕರ್, ಭಾಗ್ಯ, ಕುಮಾರಿ, ಶ್ವೇತಾ, ಮಮತಾ, ಸರಸಮಣಿ, ಶಾಂತಮ್ಮ ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಹಲವರು ಭಾಗವಹಿಸಿದ್ದರು.