ಅರಸೀಕೆರೆ: ಸಾಲ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ದಂಪತಿ

ಅರಸೀಕೆರೆ (kannadapost.com): ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಕೇಳಿದ್ದಕ್ಕೆ ಸಿಟ್ಟಿಗೆದ್ದ ದಂಪತಿ, ವ್ಯಕ್ತಿಯೊಬ್ಬನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿರುವ ದಾರುಣ ಘಟನೆ ಅರಸೀಕೆರೆ ತಾಲ್ಲೂಕಿನ ಜೆ.ಸಿ.ಪುರ ಗ್ರಾಮದಲ್ಲಿ ನಡೆದಿದೆ.

​ಮನ್ಸೂರ್ ಪಾಷಾ (38) ಕೊಲೆಯಾದ ದುರ್ದೈವಿ. ಸನಾವುಲ್ಲಾ (50) ಹಾಗೂ ಆತನ ಪತ್ನಿ ಜರೀನಾ ಭಾನು (45) ಕೊಲೆ ಆರೋಪಿಗಳಾಗಿದ್ದು, ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ

​ಸುಮಾರು ಒಂದು ವರ್ಷದ ಹಿಂದೆ ಆರೋಪಿ ಸನಾವುಲ್ಲಾ ಎಂಬುವವರು ಮನ್ಸೂರ್ ಪಾಷಾ ಬಳಿ 4೦ ಸಾವಿರ ರೂ.ಗಳನ್ನು ಸಾಲವಾಗಿ ಪಡೆದಿದ್ದರು. ಪಡೆದ ಹಣವನ್ನು ಮರಳಿ ನೀಡುವಂತೆ ಮನ್ಸೂರ್ ಪಾಷಾ ಆಗಾಗ ಒತ್ತಾಯಿಸುತ್ತಿದ್ದರು. ಆದರೆ, ಸನಾವುಲ್ಲಾ ಮಾತ್ರ ಸಾಲದ ಹಣವನ್ನು ವಾಪಸ್ ಕೊಡದೆ ಸತಾಯಿಸುತ್ತಾ ಬಂದಿದ್ದರು. ಈ ವಿಷಯವನ್ನು ಮನ್ಸೂರ್ ಪಾಷಾ ಕೆಲವರ ಬಳಿ ಹೇಳಿಕೊಂಡಿದ್ದರು.

​ಇದೇ ವಿಚಾರಕ್ಕೆ ಮನ್ಸೂರ್ ಪಾಷಾ ಮೇಲೆ ಆರೋಪಿ ಸನಾವುಲ್ಲಾ ತೀವ್ರ ಕೋಪಗೊಂಡಿದ್ದ ಎನ್ನಲಾಗಿದೆ.

ಮಾತಿನ ಚಕಮಕಿ ಹಾಗೂ ಹಲ್ಲೆ

​ಘಟನೆ ನಡೆದ ದಿನ ಮನ್ಸೂರ್ ಪಾಷಾ ಅವರು ಸನಾವುಲ್ಲಾ ಮನೆ ಪಕ್ಕದಲ್ಲೇ ಇರುವ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಅಲ್ಲಿಗೆ ಬಂದ ಸನಾವುಲ್ಲಾ, “ಸಾಲದ ವಿಚಾರವನ್ನು ಯಾಕೆ ಬೇರೆಯವರ ಬಳಿ ಹೇಳಿದ್ದೀಯಾ?” ಎಂದು ಜಗಳ ತೆಗೆದಿದ್ದಾನೆ.

​ಮಾತುಕತೆ ವಿಕೋಪಕ್ಕೆ ತಿರುಗಿ ಜಗಳ ತಾರಕಕ್ಕೇರಿದೆ. ಈ ವೇಳೆ ಸನಾವುಲ್ಲಾ ಹಾಗೂ ಆತನ ಪತ್ನಿ ಜರೀನಾ ಭಾನು ಇಬ್ಬರೂ ಸೇರಿ ಮನ್ಸೂರ್ ಪಾಷಾ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ತೀವ್ರತೆಗೆ ಮನ್ಸೂರ್ ಪಾಷಾ ಸ್ಥಳದಲ್ಲೇ ಕುಸಿದುಬಿದ್ದು ಅಸ್ವಸ್ಥರಾಗಿದ್ದಾರೆ.

​ತಕ್ಷಣ ಮುಜಾಹಿದ್ ಖಾನ್ ಎಂಬುವವರು ಗಾಯಾಳು ಮನ್ಸೂರ್ ಪಾಷಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಮಾರ್ಗಮಧ್ಯೆ ಹಾಗೂ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

ಪೊಲೀಸ್ ತನಿಖೆ

​ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಸಂಬಂಧಿಕರ ದೂರಿನ ಮೇರೆಗೆ ಆರೋಪಿಗಳಾದ ಸನಾವುಲ್ಲಾ ಹಾಗೂ ಜರೀನಾ ಭಾನು ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.