ಹಳೇಬೀಡು: ಹೊಯ್ಸಳೇಶ್ವರ ದೇವಾಲಯದ ಸುತ್ತಮುತ್ತಲಿನ ಗೂಡಂಗಡಿಗಳು ತೆರವು

ಹಳೇಬೀಡು(kannadapost.com): ವಿಶ್ವಪ್ರಸಿದ್ಧ ಐತಿಹಾಸಿಕ ಹೊಯ್ಸಳೇಶ್ವರ ದೇವಾಲಯದ ಸುತ್ತಮುತ್ತ ಸ್ವಚ್ಛತೆ ಕಾಪಾಡುವ ಹಾಗೂ ಸುಪ್ರೀಂ ಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಹಿನ್ನೆಲೆಯಲ್ಲಿ, ದೇವಾಲಯದ ಕಾಂಪೌಂಡ್ ಪಕ್ಕದಲ್ಲಿದ್ದ ಅನಧಿಕೃತ ಗೂಡಂಗಡಿಗಳನ್ನು ಗ್ರಾಮ ಪಂಚಾಯಿತಿಯಿಂದ ತೆರವು ಮಾಡಲಾಯಿತು.

ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳ ಕಡಕ್ ಎಚ್ಚರಿಕೆ

​ಕೆಲ ದಿನಗಳ ಹಿಂದೆ ಹಳೇಬೀಡಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು, “ದೇವಾಲಯದ ಸುತ್ತಮುತ್ತ ಗೂಡಂಗಡಿಗಳು ಆವರಿಸಿಕೊಳ್ಳಬಾರದು. ಪಾದಚಾರಿ ಮಾರ್ಗದಲ್ಲಿ ಯಾವುದೇ ವ್ಯಾಪಾರ-ವ್ಯವಹಾರ ಮಾಡುವಂತಿಲ್ಲ” ಎಂದು ಸ್ಪಷ್ಟ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ, ಸಕಲೇಶಪುರ ಉಪ ವಿಭಾಗಾಧಿಕಾರಿ ತಿಮ್ಮಣ್ಣ ಹುಲುಮನಿ ಅವರು ಹಳೇಬೀಡಿಗೆ ಆಗಮಿಸಿ, ಸ್ವಯಂಪ್ರೇರಿತರಾಗಿ ತೆರವುಗೊಳಿಸಲು ಅಂಗಡಿ ಮಾಲೀಕರಿಗೆ 10 ದಿನಗಳ ಗಡುವು ನೀಡಿದ್ದರು. ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ಕಾರ್ಯಾಚರಣೆ ವಿವರ ಹಾಗೂ ಪಿಡಿಒ ಸ್ಪಷ್ಟನೆ

​ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಪುರಾತತ್ವ ಇಲಾಖೆಯ ನೌಕರರು ಜಂಟಿಯಾಗಿ ಈ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

​ಕಾರ್ಯಾಚರಣೆ ಕುರಿತು ಮಾತನಾಡಿದ ಪಿಡಿಒ ಎಸ್.ಸಿ. ವಿರೂಪಾಕ್ಷ, “ಹೊಯ್ಸಳೇಶ್ವರ ದೇವಾಲಯದ ಸುತ್ತಲೂ ಸ್ವಚ್ಛತೆ ಕಾಪಾಡುವುದು ಮತ್ತು ಜಿಲ್ಲಾಧಿಕಾರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ನಿಯಮಾನುಸಾರ ಹೊಯ್ಸಳೇಶ್ವರ ದೇವಾಲಯಕ್ಕೆ ಹೊಂದಿಕೊಂಡಂತೆ ಯಾವುದೇ ಅಂಗಡಿ-ಮುಂಗಟ್ಟುಗಳನ್ನು ಇಡಬಾರದು,” ಎಂದು ತಿಳಿಸಿದರು.

ಹಿರಿಯ ನಾಗರಿಕರ ವೇದಿಕೆ ಶೆಲ್ಟರ್ ತೆರವಿಗೆ ನಿರಾಕರಣೆ

​ಇದೇ ವೇಳೆ ಸ್ಥಳದಲ್ಲಿದ್ದ ಹಿರಿಯ ನಾಗರಿಕರ ವೇದಿಕೆಯ ಕಚೇರಿಯ ಶೆಲ್ಟರ್ ಅನ್ನು ತೆರವುಗೊಳಿಸಲು ಮುಂದಾದಾಗ, ಹಿರಿಯ ನಾಗರಿಕರು ಇದಕ್ಕೆ ತೀವ್ರವಾಗಿ ನಿರಾಕರಿಸಿದರು. ಇದರಿಂದಾಗಿ ಆ ಸ್ಥಳದಲ್ಲಿ ಸ್ವಲ್ಪಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

​ದೇವಾಲಯದ ಸುತ್ತಮುತ್ತ ಒತ್ತುವರಿ ತೆರವುಗೊಳಿಸಿರುವುದರಿಂದ ಐತಿಹಾಸಿಕ ಸ್ಮಾರಕದ ಸೌಂದರ್ಯ ಮತ್ತಷ್ಟು ಹೆಚ್ಚಿದಂತಾಗಿದ್ದು, ಪ್ರವಾಸಿಗರಿಗೆ ಮುಕ್ತ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ.