ಸಿನಿಮಾ ಲೆವೆಲ್ ಮೇಕಿಂಗ್‌ನೊಂದಿಗೆ ಕಿರುತೆರೆಗೆ ‘ಜಗದ್ಧಾತ್ರಿ’ ಎಂಟ್ರಿ; ಅಂಡರ್‌ಕವರ್ ಕಾಪ್ ಆಗಿ ಮೋಕ್ಷಿತಾ ಪೈ, ವಿಜಯ್ ಸೂರ್ಯ ಕಂಬ್ಯಾಕ್

ಬೆಂಗಳೂರು (kannadapost.com): ವಿಭಿನ್ನ ಕಥೆಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಿರುವ ಜೀ ಕನ್ನಡ (Zee Kannada) ವಾಹಿನಿಯು ಇದೀಗ ಹಿಂದೆಂದೂ ಕಾಣದಂತಹ ಭವ್ಯ ಸಿನಿಮಾ ಮೇಕಿಂಗ್ ಶೈಲಿಯಲ್ಲಿ ಮತ್ತೊಂದು ಹೊಸ ಧಾರಾವಾಹಿಯನ್ನು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದೆ. ಅಂಡರ್‌ಕವರ್ ಮಹಿಳಾ ಪೊಲೀಸ್ ಅಧಿಕಾರಿಯ ಕಥಾಹಂದರ ಹೊಂದಿರುವ ‘ಜಗದ್ಧಾತ್ರಿ‘ ಇದೇ ಸೆಪ್ಟೆಂಬರ್ 28 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

​ಈ ಧಾರಾವಾಹಿಯ ಮೂಲಕ ಕಿರುತೆರೆಯ ಜನಪ್ರಿಯ ತಾರೆಯರಾದ ಮೋಕ್ಷಿತಾ ಪೈ, ವಿಜಯ್ ಲಲಿತಾ ಸೂರ್ಯ ಹಾಗೂ ಕವಿತಾ ಗೌಡ ಮತ್ತೆ ಬಣ್ಣ ಹಚ್ಚಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ.

​ಮನೆ ಬೆಳಗುವ ದೀಪ, ದುಷ್ಟರನ್ನು ಸುಡುವ ಜ್ವಾಲೆ:

ಕುಟುಂಬದ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ, ಹೊರಜಗತ್ತಿನಲ್ಲಿ ನಡೆಯುವ ಅಪರಾಧಗಳನ್ನು ಹತ್ತಿಕ್ಕುವ ಖಡಕ್ ಪೊಲೀಸ್ ಅಧಿಕಾರಿಯ ಎರಡು ವಿಭಿನ್ನ ಶೇಡ್‌ಗಳಲ್ಲಿ ಮೋಕ್ಷಿತಾ ಪೈ ‘ಜಗದ್ಧಾತ್ರಿ’ಯಾಗಿ ಕಾಣಿಸಿಕೊಂಡಿದ್ದಾರೆ. ಅಪ್ಪಟ ದೇಶಭಕ್ತೆಯಾಗಿದ್ದ ತನ್ನ ತಾಯಿಯ ಮೇಲಿನ ದೇಶದ್ರೋಹದ ಆರೋಪವನ್ನು ತೊಡೆದುಹಾಕಲು ನಾಯಕಿ ಏನೆಲ್ಲಾ ಹೋರಾಟ ಮಾಡುತ್ತಾಳೆ ಎಂಬುದರ ಸುತ್ತ ಕಥೆಯನ್ನು ಹೆಣೆಯಲಾಗಿದೆ.

​ಕಿರುತೆರೆಗೆ ವಿಜಯ್ ಸೂರ್ಯ ಕಂಬ್ಯಾಕ್:

ಈ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ಹಾಗೂ ವಿಜಯ್ ಲಲಿತಾ ಸೂರ್ಯ ಇಬ್ಬರೂ ಐಪಿಎಸ್ (IPS) ಅಧಿಕಾರಿಗಳ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಕೌಟುಂಬಿಕ ಕಥೆಯ ಜೊತೆಗೆ ಭರ್ಜರಿ ಆಕ್ಷನ್ ಹಾಗೂ ಸುಂದರ ಪ್ರೇಮಕಥೆಯೂ ಇಲ್ಲಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಇವರಿಬ್ಬರ ಡ್ಯುಯೆಟ್ ಹಾಡಿನ ‘ಜಗದ್ಧಾತ್ರಿ ಹುಕ್ ಸ್ಟೆಪ್’ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. “ಈ ಥರದ ಪಾತ್ರವನ್ನು ತುಂಬ ದಿನದಿಂದ ಮಾಡಿರಲಿಲ್ಲ. ಮತ್ತೆ ಪ್ರೀತಿ-ಪ್ರೇಮದ ಸುತ್ತ ಕಾಣಿಸಿಕೊಳ್ಳುವ ಪಾತ್ರ ಮಾಡಲು ಖುಷಿಯಿದೆ,” ಎಂದು ನಟ ವಿಜಯ್ ಸೂರ್ಯ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

​ಘಟಾನುಘಟಿ ತಾರಾಗಣ, ಅದ್ಧೂರಿ ನಿರ್ಮಾಣ:

ಬೆಳ್ಳಿತೆರೆಯಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಬರಹಗಾರ ಮಹೇಶ್‌ರಾವ್ ಹಾಗೂ ಪ್ರಕಾಶ್ ಅವರ ‘ಕೀರ್ತಿ ಅಕ್ಷಯ ನೆಟ್‌ವರ್ಕ್’ ಬ್ಯಾನರ್ ಅಡಿಯಲ್ಲಿ ಈ ಧಾರಾವಾಹಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಮಹೇಶ್ ಸಾರಂಗ್ ಇದರ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಕವಿತಾ ಗೌಡ ಪ್ರಮುಖ ಪಾತ್ರದಲ್ಲಿದ್ದರೆ, ಗಿರಿಜಾ ಲೋಕೇಶ್, ಅರುಣಾ ಬಾಲರಾಜ್, ಲಕ್ಷ್ಮೀ ಸಿದ್ದಯ್ಯ, ಮೈಕೋ ಮಂಜು, ವಚನ್ ಹೊಸಮಠ, ರವಿ ಭಟ್, ಸೋನಿಯಾ ಪೊನ್ನಮ್ಮ ಹಾಗೂ ಮಾನಸಿ ಸುಧೀರ್ ಸೇರಿದಂತೆ ದೊಡ್ಡ ತಾರಾಗಣವೇ ಧಾರಾವಾಹಿಯಲ್ಲಿದೆ.

​ಜೀ ಕನ್ನಡ ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತು:

ಹೊಸ ಧಾರಾವಾಹಿ ಕುರಿತು ಮಾತನಾಡಿದ ಜೀ ಕನ್ನಡ ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು, “ಇಂದಿನ ಕಾಲಘಟ್ಟದಲ್ಲಿ ಹೆಣ್ಣು ಪ್ರತಿ ಮನೆಯಲ್ಲೂ ವಿಭಿನ್ನ ಸವಾಲುಗಳ ಮಧ್ಯೆ ಬದುಕು ನಡೆಸುತ್ತಿದ್ದಾಳೆ. ಆ ಎಲ್ಲಾ ಸವಾಲುಗಳನ್ನು ಮೀರಿ ಜಗದ್ಧಾತ್ರಿ ಸೂಪರ್ ಕಾಪ್ ಆಗಿ ಜಗತ್ತನ್ನು ಕಾಯುವ ಕೆಲಸ ಮಾಡುತ್ತಿದ್ದಾಳೆ. ಕನ್ನಡಿಗರಿಗೆ ವಿಭಿನ್ನ ಕಥೆಗಳನ್ನು ತಲುಪಿಸುವ ನಮ್ಮ ಉದ್ದೇಶದಂತೆ, ಈ ಕಥೆಯೂ ನೋಡುಗರಿಗೆ ಹೊಸ ಅನುಭವ ನೀಡಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.