ಹಾಸನ, ಆಗಸ್ಟ್ 16, 2025: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 400 ಕಾರುಗಳಲ್ಲಿ ತಮ್ಮ ಬೆಂಬಲಿಗರೊಂದಿಗೆ ಧರ್ಮಸ್ಥಳ ಪರ ಬೆಂಬಲ ವ್ಯಕ್ತಪಡಿಸಿ ಪ್ರವಾಸ ಕೈಗೊಂಡಿರುವ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಶ್ರೀ ಮಂಜುನಾಥ ಸ್ವಾಮಿಯ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರಿಗೆ ದೇವರು ಶಿಕ್ಷೆ ನೀಡಲಿ. ಸೋಮವಾರದ ವಿಧಾನಸಭಾ ಅಧಿವೇಶನದಲ್ಲಿ ಎಸ್ಐಟಿ ತನಿಖೆ ವರದಿಯನ್ನು ಮಂಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
“ಸೌಜನ್ಯ ಕೇಸ್ ತನಿಖೆಗೆ ನಮ್ಮ ಅಡ್ಡಿಯಿಲ್ಲ, ನಾವು ಸ್ವಾಗತಿಸುತ್ತೇವೆ. ಆದರೆ ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲಸವನ್ನು ವಿಚಾರವಾದಿಗಳು ಮತ್ತು ಧರ್ಮವಿರೋಧಿಗಳು ಮಾಡುತ್ತಿದ್ದಾರೆ. ಇದು ರಾಜ್ಯ ಮತ್ತು ದೇಶದ ಕೋಟ್ಯಾನುಕೋಟಿ ಭಕ್ತರ ಭಾವನೆಗೆ ಧಕ್ಕೆ ತರುವ ಕೃತ್ಯ,” ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು. “ಮಂಜುನಾಥ ಸ್ವಾಮಿಯ ವಿರುದ್ಧ ಅಪಪ್ರಚಾರ ಮಾಡುವವರಿಗೆ ಸರ್ಕಾರದ ಶಿಕ್ಷೆ ಒಂದೆಡೆಯಾದರೆ, ದೇವರ ಶಿಕ್ಷೆ ಮತ್ತೊಂದೆಡೆ,” ಎಂದು ಹೇಳಿದರು.
ಅನಾಮಿಕ ವ್ಯಕ್ತಿಯ ದೂರಿನ ಆಧಾರದ ಮೇಲೆ ಎಸ್ಐಟಿ ಉತ್ಖನನ ನಡೆಸಿರುವುದನ್ನು ಟೀಕಿಸಿರುವ ಶಾಸಕರು, “ಅನಾಮಿಕನ ಮಾತಿಗೆ ಕಿವಿಗೊಟ್ಟು ತಪ್ಪು ಮಾಡಿದ್ದೇವೆ ಎಂದು ಸರ್ಕಾರಕ್ಕೆ ಈಗ ಅನಿಸಿರಬಹುದು. ಹದಿಮೂರನೇ ಪಾಯಿಂಟ್ನಲ್ಲಿ ಏನೂ ಸಿಗಲಿಲ್ಲ. ಇಂತಹ ದೂರಿನ ಆಧಾರದಲ್ಲಿ ಇಡೀ ಧರ್ಮಸ್ಥಳವನ್ನೇ ಅಗೆಯಬೇಕೇ? ವಿಧಾನಸೌಧ ಕಟ್ಟುವಾಗ ಯಾರನ್ನಾದರೂ ಕೊಂದು ಸ್ಪೀಕರ್ ಕುರ್ಚಿಯ ಕೆಳಗೆ ಹೂತಿದ್ದೇವೆ ಎಂದರೆ ಅಗೆಯಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
“ಅನಾಮಿಕನನ್ನು ಮಂಪರು ಪರೀಕ್ಷೆಗೆ ಒಳಪಡಿಸಿ, ಸುಳ್ಳು ಹೇಳಿದ್ದರೆ ಕ್ರಮ ಕೈಗೊಳ್ಳಬೇಕು,” ಎಂದು ಒತ್ತಾಯಿಸಿರುವ ವಿಶ್ವನಾಥ್, ಲಾಯರ್ ಜಗದೀಶ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಅವರ ಹೆಸರು ಹೇಳಲು ಅಸಹ್ಯವಾಗುತ್ತದೆ. ಇಂತಹ ಹುಚ್ಚುನಾಯಿಗಳನ್ನು ಸುಮ್ಮನೆ ಬಿಡಲಾಗದು. ಧರ್ಮಸ್ಥಳಕ್ಕೆ ನಾವು ಭಕ್ತಿಯಿಂದ ಹೋದರೆ ಇವರಿಗೇನು? ಬುದ್ಧಿ ಕಲಿಸುವುದು ನಮಗೆ ಗೊತ್ತು,” ಎಂದು ಎಚ್ಚರಿಕೆ ನೀಡಿದ್ದಾರೆ.
ತಮ್ಮ ವಿರುದ್ಧವೂ ಅಪಪ್ರಚಾರ ನಡೆಯುತ್ತಿದೆ ಎಂದ ಶಾಸಕರು, “ನನ್ನ ಹಕ್ಕುಗಳಿಗೆ ಚ್ಯುತಿಯಾಗುತ್ತಿದೆ. ಈ ಬಗ್ಗೆ ಸೋಮವಾರ ಅಧಿವೇಶನದಲ್ಲಿ ಹಕ್ಕುಚ್ಯುತಿ ಪ್ರಸ್ತಾಪ ಮಂಡಿಸುತ್ತೇನೆ,” ಎಂದು ತಿಳಿಸಿದ್ದಾರೆ.
“ನಾಳೆಯಿಂದ ಧರ್ಮಸ್ಥಳಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಕ್ಷೇತ್ರವನ್ನು ತುಂಬಿ ತುಳುಕಬೇಕು. ಜನರು ದೇವರ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳಬಾರದು,” ಎಂದು ವಿಶ್ವನಾಥ್ ಮನವಿ ಮಾಡಿದರು.










