Hassan: ಮೋದಿಗೆ ಸಾಂಸಾರಿಕ ಬದುಕು ಅರ್ಥವಾಗಿಲ್ಲ-ಪೆಟ್ರೋಲ್, ಡೀಸೆಲ್ ದರ ಏರಿಕೆ: ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ

ಹಾಸನದಲ್ಲಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಪೆಟ್ರೋಲ್, ಡೀಸೆಲ್ ದರ ಏರಿಕೆ ಹಾಗೂ ನೀಟ್ ಪರೀಕ್ಷೆ ಅಕ್ರಮ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಂಪೂರ್ಣ ಸುದ್ದಿ ಓದಿ.

Hassan|ಹಾಸನ: ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಖಂಡಿಸಿ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ವಿರುದ್ಧ ಏಕವಚನದಲ್ಲೇ ಹರಿಹಾಯ್ದಿದ್ದು, ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಹಾಗೂ ಇತ್ತೀಚಿನ ನೀಟ್ (NEET) ಪರೀಕ್ಷೆ ಅಕ್ರಮದ ಬಗ್ಗೆ ಕಟುವಾಗಿ ಟೀಕಿಸಿದ್ದಾರೆ.

​”ಅಚ್ಛೇ ದಿನ್ ಆಯೇಗಾ ಅಂತ ಮೋದಿಯವರು ಹೇಳಿದ್ದು ಇದನ್ನೇನಾ? ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಜನರ ಮೇಲೆ ಬೆಲೆ ಏರಿಕೆ ಎಂಬ ಗದಾಪ್ರಹಾರ ಮಾಡುತ್ತಿದ್ದಾರೆ. ಮೋದಿಗೆ ನಾಚಿಕೆಯಾಗಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರೋನಾ ಪ್ಯಾಂಡಮಿಕ್ ಸಂದರ್ಭದಲ್ಲಿ ಸಂಗ್ರಹಿಸಿದ ಪಿಎಂ ಕೇರ್ಸ್ (PM CARES) ನಿಧಿ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ ಅವರು, ಆರ್ಥಿಕ ತಜ್ಞರ ಜೊತೆ ಚರ್ಚಿಸದೆ ಕೇವಲ ಆರ್‌ಎಸ್‌ಎಸ್‌ನವರು (RSS) ಹೇಳಿದ್ದನ್ನು ಮಾತ್ರ ಘೋಷಣೆ ಮಾಡುತ್ತಿದ್ದಾರೆ. ಇದರಿಂದ ದೇಶದ ಸಾಮರಸ್ಯ ಮತ್ತು ಆರ್ಥಿಕತೆ ಸಂಪೂರ್ಣ ಹಾಳಾಗಿದೆ ಎಂದು ಆರೋಪಿಸಿದರು.

ಮೋದಿಗೆ ಸಾಂಸಾರಿಕ ಬದುಕು ಅರ್ಥವಾಗಿಲ್ಲ

ಜನರ ವಾಸ್ತವ ಬದುಕಿನ ಬಗ್ಗೆ ಪ್ರಧಾನಿಗೆ ಅರಿವಿಲ್ಲ ಎಂದು ಟೀಕಿಸಿದ ಉಗ್ರಪ್ಪ, “ಚಿನ್ನ, ಬೆಳ್ಳಿ ಕೊಳ್ಳಬೇಡಿ ಅಂತೀರಾ, ಮದುವೆಯಾಗಬೇಕಾದರೆ ತಾಳಿ, ಕಾಲುಂಗುರ ಬೇಡ್ವಾ? ಮೋದಿಯವರಿಗೆ ಸಾಂಸಾರಿಕ ಬದುಕು ಅರ್ಥವಾಗಿಲ್ಲ, ಬರೀ ರಾಮನ ಹೆಸರು ಮಾತ್ರ ಹೇಳುತ್ತಾರೆ” ಎಂದು ವ್ಯಂಗ್ಯವಾಡಿದರು.

​ರೈತರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುತ್ತಾ, “ವರ್ಕ್ ಫ್ರಂ ಹೋಂ ಮಾಡಲು ರೈತ ಹೇಗೆ ಸಾಧ್ಯ? ಆರ್ಥಿಕತೆಯನ್ನು ಅತ್ಯಂತ ಕೆಟ್ಟ ಸ್ಥಿತಿಗೆ ತೆಗೆದುಕೊಂಡು ಹೋದವರು ಯಾರಾದರೂ ಇದ್ದರೆ ಅದು ಮಿಸ್ಟರ್ ಮೋದಿ. ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ವಿಶೇಷ ಅಧಿವೇಶನವನ್ನೂ ಕರೆದು ಚರ್ಚಿಸದೆ ಏಕಾಏಕಿ ನಿರ್ಬಂಧಗಳನ್ನು ಹೇರಲಾಗುತ್ತಿದೆ” ಎಂದು ಕಿಡಿಕಾರಿದರು.

ನೀಟ್ ಪರೀಕ್ಷೆ ಅಕ್ರಮ: ನೈತಿಕ ಹೊಣೆ ಯಾರು ಹೊರುತ್ತಾರೆ?

ಇದೇ ವೇಳೆ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವನ್ನೂ ಪ್ರಸ್ತಾಪಿಸಿದ ಅವರು, ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದರು. “ನಿಮ್ಮ ವೈಫಲ್ಯದಿಂದಾಗಿ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಲೀಕ್ ಆಗಿದೆ. ಹಗಲು ರಾತ್ರಿ ಓದಿದ್ದ ಮಕ್ಕಳಿಗೆ ಇದರಿಂದ ದೊಡ್ಡ ಅನ್ಯಾಯವಾಗಿದೆ. ಇದರ ನೈತಿಕ ಹೊಣೆಯನ್ನು ಯಾರು ಹೊರುತ್ತಾರೆ? ನೀನೇನು ಮಾಡುತ್ತಿದ್ದೀಯಪ್ಪಾ ಮಿಸ್ಟರ್ ಮೋದಿ?” ಎಂದು ನೇರವಾಗಿ ಗುಡುಗಿದರು.

​”ನಿಮಗೆ ಏನಾದರೂ ಸ್ವಲ್ಪ ಬದ್ಧತೆ ಇದ್ದರೆ ಕೂಡಲೇ ದೇಶದ ಜನರ ಕ್ಷಮೆ ಯಾಚಿಸಬೇಕು ಹಾಗೂ ಬೆಲೆ ಏರಿಕೆಯನ್ನು ತಕ್ಷಣವೇ ವಾಪಾಸ್ ತೆಗೆದುಕೊಳ್ಳಬೇಕು” ಎಂದು ವಿ.ಎಸ್. ಉಗ್ರಪ್ಪ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.