ಚನ್ನರಾಯಪಟ್ಟಣ: ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಬರುವ ವರಲಕ್ಷ್ಮಿ ಹಬ್ಬ, ವ್ರತ ಹಿಂದೂಗಳ ಪವಿತ್ರ ಹಬ್ಬಗಳಲ್ಲೊಂದು, ಭಕ್ತರು ತಮ್ಮ ಇಷ್ಟಾರ್ಥಗಳ ಸಿದ್ದಿಗಾಗಿ ವರಲಕ್ಷ್ಮಿಯನ್ನು ಪೂಜಿಸುವುದು ವಾಡಿಕೆ, ಆಗಸ್ಟ್. ೮ರ ಶ್ರಾವಣ ಶುಕ್ರವಾರವಾದಂದು ಎಲ್ಲರ ಮನೆಗಳಲ್ಲಿಯೂ ಸಂಭ್ರಮದ ವಾತವಾರಣ, ಮುಂಜಾನೆಯೇ ಎದ್ದು, ಮಡಿ ತೊಟ್ಟು, ಮನೆ, ಮನ ಶುಭ್ರತೆಯೊಂದಿಗೆ ತಮ್ಮ ಇಚ್ಛಾನುಸರ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು.
ಹಿಂದೂ ಸಂಪ್ರದಾಯದಲ್ಲಿ ಶ್ರಾವಣ ಮಾಸವೆಂದರೇ ಹಬ್ಬಗಳ ಮಾಸ, ಅದರಲ್ಲೂ ಹೆಣ್ಣು ಮಕ್ಕಳು, ಮಹಿಳೆಯರಿಗಂತೂ ವರಲಕ್ಷ್ಮಿ ಹಬ್ಬ ಹೆಚ್ಚು ಪ್ರಿಯವಾದ ಹಬ್ಬ, ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತವಾಗಿದೆ. ಹೀಗಾಗಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ.
ಸಣ್ಣ ಉಕ್ಕಿನ, ತಾಮ್ರದ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಲಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಲಕ್ಷ್ಮಿಯ ಮುಖದ ಕವಚ ಧರಿಸಿ, ಹೊಸ ಸೀರೆಯನ್ನು ಉಡಿಸಿ ಅಲಂಕರಿಸುತ್ತಾರೆ. ಜೊತೆ ಒಡವೆಗಳನ್ನು ಹಾಕಿ ಸಿಂಗಾರಗೊಳಿಸುತ್ತಾರೆ.
ಶುಕ್ರವಾರದ ವರಮಹಾಲಕ್ಷ್ಮಿಯನ್ನು ಬ್ರಾಹ್ಮೀ ಲಗ್ನದಲ್ಲಿ ಪ್ರತಿಷ್ಠಾಪನೆ ಮಾಡಬೇಕು, ಇದೇ ಮುಹೂರ್ತದಲ್ಲಿ ಲಕ್ಷ್ಮಿಯನ್ನು ಕೂರಿಸಿ ಪೂಜೆ ಸಲ್ಲಿಸಬೇಕು. ಈ ಮುಹೂರ್ತದಲ್ಲಿ ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಿದರೆ ನಮ್ಮ ಪ್ರಾರ್ಥನೆ ದೇವಿಗೆ ತಲುಪಿ, ನಮ್ಮ ಇಷ್ಠಾರ್ಥಗಳನ್ನು ಈಡೇರಿಸುತ್ತಾಳೆ ಎನ್ನುವ ನಂಬಿಕೆಯಿದೆ. ಸಂಜೆ ಅಕ್ಕಪಕ್ಕದ ಮುತ್ತೈದೆಯರುರನ್ನು ಕರದು ಅರಿಶಿಣ ಕುಂಕಮಕ್ಕೆ ಕರೆದು ಮುಡಿ ತುಂಬಿ ಕಳಿಸಿಕೊಡುತ್ತಾರೆ.
ಹಬ್ಬದ ಹಿನ್ನಲೆ: ಪುರಾಣದಲ್ಲಿ ಚಾರುಮತಿ ಎಂಬಾಕೆ ನಿಸ್ವಾರ್ಥವಾಗಿ ತನ್ನ ಅತ್ತೆ ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿಮಾತೆ, ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಠಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ.
ಆ ಕಾರಣದಿಂದ ಚಾರುಮತಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ, ಅಂದರೇ ಶ್ರಾವಣ ಮಾಸದ ಎರಡನೇ ಶುಕ್ರವಾರ ವರ ಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಠಾರ್ಥಗಳನ್ನು ಪೂರೈಸಿಕೊಳ್ಳುತ್ತಾಳೆ ಈ ನಂಬಿಕೆಯಡಿಯೇ ಇಂದಿನ ಕಾಲದಲ್ಲೂ ಭಕ್ತರು ತಮ್ಮ ಇಷ್ಠಾರ್ಥಗಳ ಪೂರೈಕೆಗಾಗಿ ವರಲಕ್ಷ್ಮಿ ವ್ರತ ಮಾಡುತ್ತಾ ಬಂದಿದ್ದಾರೆ.
ಹಾಗೂ ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಕಥೆಯಿದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದಾರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಲಕ್ಷ್ಮೀ ಉದ್ಭವಿಸುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮಿಯ ಆರಾಧನೆಗಾಗಿ ಈ ಹಬ್ಬವಾಗಿದೆ. ಲಕ್ಷ್ಮಿಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಇದ್ದು, ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ.










