ವಡೋದರಾ: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಅವರು ಶ್ರೀಲಂಕಾದ ದಿಗ್ಗಜ ಕುಮಾರ ಸಂಗಕ್ಕರರನ್ನು ಹಿಂದಿಕ್ಕಿದ್ದಾರೆ.
ಭಾನುವಾರ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 93 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದರು. ಇದರೊಂದಿಗೆ ಟೆಸ್ಟ್, ಏಕದಿನ ಮತ್ತು ಟಿ20 ಸೇರಿ ಅವರ ಒಟ್ಟು ಅಂತಾರಾಷ್ಟ್ರೀಯ ರನ್‌ಗಳ ಸಂಖ್ಯೆ 28,068ಕ್ಕೆ ಏರಿಕೆಯಾಯಿತು. ಕೊಹ್ಲಿ ಈ ಸಾಧನೆಯನ್ನು ಕೇವಲ 557 ಪಂದ್ಯಗಳಲ್ಲಿ ಮಾಡಿದ್ದಾರೆ.
ಇದರಿಂದಾಗಿ 594 ಪಂದ್ಯಗಳಲ್ಲಿ 28,016 ರನ್ ಗಳಿಸಿದ್ದ ಕುಮಾರ ಸಂಗಕ್ಕರ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 664 ಪಂದ್ಯಗಳಲ್ಲಿ 34,357 ರನ್ ಗಳಿಸಿ ಇನ್ನೂ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ಇದಲ್ಲದೆ, ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 28 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಅವರು 624 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಸಚಿನ್ ಈ ಸಾಧನೆಗೆ 644 ಇನ್ನಿಂಗ್ಸ್ ತೆಗೆದುಕೊಂಡಿದ್ದರೆ, ಸಂಗಕ್ಕರ 666 ಇನ್ನಿಂಗ್ಸ್‌ಗಳಲ್ಲಿ 28 ಸಾವಿರ ರನ್ ಗಳಿಸಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಟಾಪ್–5 ಆಟಗಾರರ ಪಟ್ಟಿ ಹೀಗಿದೆ: ಸಚಿನ್ ತೆಂಡೂಲ್ಕರ್ (34,357), ವಿರಾಟ್ ಕೊಹ್ಲಿ (28,068), ಕುಮಾರ ಸಂಗಕ್ಕರ (28,016), ರಿಕಿ ಪಾಂಟಿಂಗ್ (27,483) ಮತ್ತು ಮಹೇಲಾ ಜಯವರ್ಧನೆ (25,957).










