ತುಮಕೂರು : ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಾರೆಕುರ್ಚಿ ಗ್ರಾಮದಲ್ಲಿ ಅತ್ತೆ–ಸೊಸೆ ನಡುವಿನ ಕಲಹದ ಹಿನ್ನೆಲೆ ವೃದ್ಧ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಬ್ರಮರಾಂಭಿಕ (66) ಮೃತ ಮಹಿಳೆಯಾಗಿದ್ದಾರೆ.
ಮೃತ ಬ್ರಮರಾಂಭಿಕ ಅವರು ಬಿಜೆಪಿ ಮುಖಂಡ ಕುಂದರನಹಳ್ಳಿ ರಮೇಶ್ ಅವರ ಅಕ್ಕ ಎಂದು ತಿಳಿದುಬಂದಿದೆ. ಅತ್ತೆ–ಸೊಸೆ ನಡುವಿನ ನಿರಂತರ ಕಲಹ ಹಾಗೂ ಕಿರುಕುಳವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಘಟನೆಯ ಇನ್ನೊಂದು ಆತಂಕಕಾರಿ ಅಂಶವೆಂದರೆ, ಮೃತ ಬ್ರಮರಾಂಭಿಕ ಅವರ ಒಂದು ಕಣ್ಣಿನ ಗುಡ್ಡೆ ಕಾಣೆಯಾಗಿರುವುದು. ಇದರಿಂದ ಸಾವಿನ ಸುತ್ತ ಅನುಮಾನಗಳ ಹುತ್ತ ಮತ್ತಷ್ಟು ಗಟ್ಟಿಯಾಗಿದ್ದು, ಪೊಲೀಸರು ವಿವಿಧ ಕೋನಗಳಿಂದ ತನಿಖೆ ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಎಎಸ್ಪಿ ಪುರುಷೋತ್ತಮ್ ಹಾಗೂ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತುಮಕೂರು ಜಿಲ್ಲಾ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಈ ಘಟನೆ ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.










