ಹಾಸನ: ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ- ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಗೆ ಸಾಂತ್ವನ ಹೇಳಿದ ನ್ಯಾಯಾಧೀಶೆ‌ ಜಿ.ಕೆ. ದಾಕ್ಷಾಯಿಣಿ

This is a despicable act and society is bowing its head. Everyone needs to wake up to such an incident, he said.

ಹಾಸನ: ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ನ್ಯಾಯಾಧೀಶೆ ಜಿ.ಕೆ. ದಾಕ್ಷಾಯಿಣಿ ಅವರು ಶಾಲಾ ವಾಹನ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಮಗುವಿಗೆ ಜನ್ಮ ನೀಡಿರುವ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಭೇಟಿ ಮಾಡಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಘಟನೆಯ ಕುರಿತು ಮಾಹಿತಿಯನ್ನು ಪಡೆದು ಸಾಂತ್ವನ ಹೇಳಿದರು.

ನಂತರ ಅಧಿಕಾರಿಗಳಿಂದ ಘಟನೆ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಇದೊಂದು ಹೇಯ ಕೃತ್ಯವಾಗಿದ್ದು ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇಂತಹ ಘಟನೆಯಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಿದ್ಯಾರ್ಥಿನಿಗೆ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು ಮತ್ತು ವ್ಯತಿರಿಕ್ತ ಪರಿಣಾಮಗಳು ಜರುಗದಂತೆ ಮುಂಜಾಗ್ರತಾ ಕ್ರಮವಹಿಸುವಂತೆ ತಿಳಿಸಿದರು.

ಅಲ್ಲದೆ ವಿದ್ಯಾರ್ಥಿನಿಯ ಶಿಕ್ಷಣವು ಕುಂಠಿತಗೊಳ್ಳದಂತೆ ಸಂಬಂಧಪಟ್ಟ ಮಕ್ಕಳ ಸಮಗ್ರ ರಕ್ಷಣಾ ಘಟಕ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಶಿಕ್ಷಣ ಇಲಾಖೆ ಅಗತ್ಯ ಕ್ರಮವಹಿಸಬೇಕೆಂದು ತಿಳಿಸಿದರು.

ದಿನನಿತ್ಯ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಮಕ್ಕಳ ಹಕ್ಕುಗಳ ಕುರಿತು ವ್ಯಾಪಕವಾಗಿ ಅರಿವು ಕಾರ್ಯಕ್ರಮವನ್ನು ಮಾಡುತ್ತಿದ್ದರೂ ಕೂಡ ಇಂತಹ ಘಟನೆಗಳು ಆಗಾಗ್ಗೆ ಮರುಕಳಿಸುತ್ತಿರುತ್ತದೆ ಆದುದರಿಂದ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು.

ಮಕ್ಕಳನ್ನು ರಕ್ಷಿಸುವ ಹೊಣೆಗಾರಿಕೆ ಶಾಲೆಯ ಮುಖ್ಯಸ್ಥರು, ಪೋಷಕರು ಹಾಗೂ ಸಮಾಜದ ಮೇಲಿದೆ. ಇಂತಹ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕಾನೂನಿನ ಮೂಲಕ ಘಟನೆಯ ಸತ್ಯಾಸತ್ಯತೆಯ ಕುರಿತು ಪೊಲೀಸರು ಕ್ರಮವಹಿಸಿ ತಪ್ಪಿತಸ್ಥರ ವಿರುದ್ಧ ವರದಿಯನ್ನು ನ್ಯಾಯಾಲಯಕ್ಕೆ ಶೀಘ್ರವಾಗಿ ಒಪ್ಪಿಸುವಂತೆ ಸೂಚಿಸಿದರು.

ನೊಂದ ಅಪ್ರಾಪ್ತ ಬಾಲಕಿಗೆ ಕಾನೂನು ಸೇವೆಗಳ ಪ್ರಾಧಿಕಾರವು ಕಾನೂನಿನ ನೆರವನ್ನು ನೀಡಲಿದ್ದು ಈ ಬಗ್ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ನೊಂದ ಬಾಲಕಿಯ ಪೋಷಕರಿಗೆ ತಿಳಿಸಿದರು.

ಈ ಮೂಲಕ ನ್ಯಾಯಾಧೀಶರ ಭೇಟಿಯ ಸಮಯದಲ್ಲಿ ಒನ್ ಸ್ಟಾಪ್ ಸಖಿ ಸೆಂಟರ್ ನ ಸಿಬ್ಬಂದಿಗಳು ಸಮಾಲೋಚಕರು ವಕೀಲರಾದ ಬಿಂದೇಶ್ವರಿ ಕೆ. ಆರ್. ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ನಾಗಪ್ಪ ಜಿಎಸ್ ನಿವಾಸಿ ವೈದ್ಯಾಧಿಕಾರಿ ಡಾ.ಜ್ಯೋತಿ ಆರ್ ಎಸ್ ಹಾಗೂ ಮಕ್ಕಳ ಸಮಗ್ರ ರಕ್ಷಣಾ ಘಟಕದ ಸಿಬ್ಬಂದಿಗಳಾದ ಕಾಂತರಾಜುರವರು ಉಪಸ್ಥಿತರಿದ್ದರು.