ಅರಕಲಗೂಡು: ಪೊಲೀಸ್ ರಕ್ಷಣೆ ಕೋರಿದ ಮಹಿಳೆಗೆ ಅವಾಚ್ಯ ನಿಂದನೆ, ಬೆದರಿಕೆ; ಅರಕಲಗೂಡಿನಲ್ಲಿ ಎಎಸ್‌ಐ ವರ್ತನೆಗೆ ಭಾರೀ ಆಕ್ರೋಶ

The woman, who came to the house in fear, was attacked by her husband's family, who ripped open the house's doors and threw out her belongings.

ಅರಕಲಗೂಡು : ಪತಿಯ ಮನೆಯವರಿಂದ ಹಲ್ಲೆಗೆ ಒಳಗಾಗಿ ಪೊಲೀಸ್ ರಕ್ಷಣೆ ಕೋರಿದ ಮಹಿಳೆಗೆ ಪೊಲೀಸ್ ಅಧಿಕಾರಿಯೊಬ್ಬ ಮನೆ ಬಾಗಿಲಿಗೆ ಬಂದು ಅವಾಚ್ಯ ಪದ ಬಳಕೆಯಿಂದ ನಿಂದಿಸಿದಲ್ಲದೆ ಅನುಚಿತವಾಗಿ ವರ್ತಿಸಿ ದರ್ಪ ತೋರಿ ಬೆದರಿಕೆ ಹಾಕಿರುವ ಅಮಾನವೀಯ ಘಟನೆ ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ.

ಅರಕಲಗೂಡು ಪಟ್ಟಣದ ಕೋಟೆ ಬ್ರಾಹ್ಮಣ ಬೀದಿಯಲ್ಲಿ ವಾಸವಾಗಿರುವ ಅರ್ಪಿತಾ ಎಂಬ ಮಹಿಳೆ ಮೇಲೆ ವಾಸದ ಮನೆ ಖಾಲಿ ಮಾಡುವಂತೆ ಗಂಡನ ಕುಟುಂಬಸ್ಥರು ಶನಿವಾರ ಸಂಜೆ ಹಲ್ಲೆ ಮಾಡಿ ಸಾಮಾನುಗಳನ್ನು ಹೊರಹಾಕಿದ್ದಾರೆ. ಈ ವೇಳೆ 112ಗೆ ಕಾಲ್ ಮಾಡಿದಲ್ಲದೇ ಹತ್ತಿರದಲ್ಲಿಯೇ ಇರುವ ಪೊಲೀಸ್ ಠಾಣೆಗೆ ರಕ್ಷಣೆ ಕೋರಿ ದೂರು ನೀಡಲು ಹೋದ ಸಂದರ್ಭದಲ್ಲಿ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ.

ಭಯದಿಂದ ವಾಸದ ಮನೆ ಬಳಿ ಬಂದ ಮಹಿಳೆ ಮೇಲೆ ಗಂಡನ ಮನೆಯವರು ಹಲ್ಲೆಯನ್ನು ಮುಂದುವರಿಸಿ, ಮನೆಯ ಸೀಟ್ ಬಿಚ್ಚಿ, ಸಾಮಾನುಗಳನ್ನು ಹೊರಹಾಕಿದ್ದಾರೆ.

ತಡವಾಗಿ ಸ್ಥಳಕ್ಕೆ ಆಗಮಿಸಿದ ಎಎಸ್‌ಐ ದೇವರಾಜು,ಹಲ್ಲೆಗೆ ಒಳಗಾದ ಮಹಿಳೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ನ್ಯಾಯ ಕೊಡಿಸುವ ಬದಲು ದರ್ಪ ಮೆರೆದಿದ್ದಾನೆ.

ಘಟನೆಯ ಹಿನ್ನೆಲೆ :
ಅರ್ಪಿತಾ ಅವರು ಐದು ವರ್ಷಗಳ ಹಿಂದೆ ಶಶಿಕುಮಾರ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಕಳೆದ ಒಂದು ವರ್ಷದಿಂದ ಪತಿ ಮತ್ತು ಮನೆಯವರು ಆಕೆಯನ್ನು ಸರಿಯಾಗಿ ನಡೆಸಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಪತಿ ಮನೆಯಲ್ಲಿ ಇಲ್ಲದ ಸಮಯ ಸಾಧಿಸಿ ಅತ್ತೆ ಭಾಗ್ಯಮ್ಮ, ಅತ್ತಿಗೆ ಗೀತಾ, ನಾದಿನಿ ಜ್ಯೋತಿ ಹಾಗೂ ಬಾವ ಲೋಕೇಶ್ ಸೇರಿ ಅರ್ಪಿತಾ ವಾಸವಿದ್ದ ಮಹಡಿಯ ಮನೆಗೆ ಬೀಗ ಹಾಕಿ, ಆಕೆಯನ್ನು ಮನೆಯಿಂದ ಹೊರಹಾಕಲು ಯತ್ನಿಸಿದ್ದಾರೆ.

ಪೊಲೀಸರ ಉದ್ಧಟತನ:

ತನ್ನ ಮೇಲೆ ಹಲ್ಲೆ ನಡೆಯುತ್ತಿರುವಾಗ ರಕ್ಷಣೆ ಕೋರಿ ಅರ್ಪಿತಾ 112 ಸಹಾಯವಾಣಿಗೆ ಕರೆ ಮಾಡಿದ್ದರು. ಆದರೆ ಸಮಯಕ್ಕೆ ಸರಿಯಾಗಿ ವಾಹನ ಬಂದಿಲ್ಲ. ಅನಿವಾರ್ಯವಾಗಿ ಪೊಲೀಸ್ ಠಾಣೆಗೆ ಕರೆ ಮಾಡಿದಾಗ ಸ್ಥಳಕ್ಕೆ ಬಂದ ಎಎಸ್‌ಐ ದೇವರಾಜ್, ಸಂತ್ರಸ್ತೆಗೆ ಸಾಂತ್ವನ ಹೇಳುವ ಬದಲು ಹಲ್ಲೆ ಮಾಡಿದವರ ಪರವಾಗಿ ನಿಂತಿದ್ದಾರೆ ಎನ್ನಲಾಗಿದೆ.

ಅವಾಚ್ಯ ಪದಬಳಕೆಯಿಂದ ನಿಂದನೆ :
ಎಎಸ್‌ಐ ದೇವರಾಜ್ ಅವರು ಅರ್ಪಿತಾ ಅವರಿಗೆ ಅಸಭ್ಯ ಪದಗಳಿಂದ ನಿಂದಿಸಿ, ಧಮ್ಕಿ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಲ್ಲೆಗೊಳಗಾಗಿ ಠಾಣೆ ಮೆಟ್ಟಿಲೇರಿದರೂ ಎಎಸ್‌ಐ ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಸಂತ್ರಸ್ತೆ ಅರ್ಪಿತಾ ಆರೋಪಿಸಿದ್ದಾರೆ.

ಆಸ್ಪತ್ರೆಗೆ ದಾಖಲು​:

ಗಂಡನ ಮನೆಯವರಿಂದ ಹಲ್ಲೆಗೆ ಒಳಗಾಗಿ ಸದ್ಯ ತೀವ್ರ ಎದೆನೋವು ಹಾಗೂ ಕೈಗೆ ಆದ ಗಾಯಗಳಿಂದ ಬಳಲುತ್ತಿರುವ ಅರ್ಪಿತಾ ಅವರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ಪ್ರೀತಿಸಿ ಮದುವೆಯಾದ ಪತಿಯೇ ಈಗ ಮನೆಯಿಂದ ಹೊರಹಾಕಲು ಯತ್ನಿಸುತ್ತಿದ್ದಾನೆ,? ರಕ್ಷಣೆ ನೀಡಬೇಕಾದ ಪೊಲೀಸರೇ ಹಲ್ಲೆಕೋರರ ಜೊತೆ ಸೇರಿ ನನಗೆ ಬೆದರಿಕೆ ಹಾಕುತ್ತಿದ್ದಾರೆ” ಎಂದು ಸಂತ್ರಸ್ತೆ ಕಣ್ಣೀರು ಹಾಕುತ್ತಾ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

​ನ್ಯಾಯ ನೀಡಬೇಕಾದ ಕಾನೂನು ಪಾಲಕರೇ ಈ ರೀತಿ ವರ್ತಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕೂಡಲೇ ಉನ್ನತ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಸಂತ್ರಸ್ತೆಗೆ ನ್ಯಾಯ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಅಂತಿಮವಾಗಿ ಹಲ್ಲೆಗೊಳಗಾದ ಅರ್ಪಿತಾ ಮತ್ತು ತಂದೆ ತಾಯಿ ಮತ್ತು ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿಸ್ತುಕ್ರಮದ ಭರವಸೆ :

ಅರಕಲಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ತುರ್ತು ಸಹಾಯವಾಣಿ 112ಗೆ ಕರೆ ಮಾಡಿದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿನೀಡಿದ ಎಎಸ್‌ಐ ದೇವರಾಜು ನೊಂದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಷಯವು ಈಗಾಗಲೇ ನಮ್ಮ ಗಮನಕ್ಕೆ ಬಂದಿದ್ದು,ಈ ವಿಷಯದ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಶಿಸ್ತುಕ್ರಮ ಜರುಗಿಸಲಾಗುವುದು ಹಾಗೂ ಸಾರ್ವಜನಿಕರೊಂದಿಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಅನುಚಿತವಾಗಿ ವರ್ತನೆಗೆ ಅಸ್ಪದ ನೀಡುವುದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಶುಭಾನ್ವಿತಾ ಅವರು ಎಚ್ಚರಿಕೆ ನೀಡಿದ್ದಾರೆ.

The woman, who came to the house in fear, was attacked by her husband’s family, who ripped open the house’s doors and threw out her belongings.