ಸಕಲೇಶಪುರ: ಜನಪರ ಹೋರಾಟಗಾರ ಎಡೆಹಳ್ಳಿ ಮಂಜುನಾಥ್ ಸೇರಿದಂತೆ 18 ಜನರ ಮೇಲೆ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂಪಡೆಯುವಂತೆ ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಜಾನೆಕೆರೆ ಸಾಗರ್ ಒತ್ತಾಯಿಸಿದ್ದಾರೆ.
ಮಲೆನಾಡು ರಕ್ಷಣಾ ಸೇನೆ ವತಿಯಿಂದ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿ, ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ನಮ್ಮ ರಾಜ್ಯದಲ್ಲಿ ನಡೆಯುತ್ತಿದೆ. ಅರ್ಜುನ ಆನೆಯ ಸ್ಮಾರಕ ಪರ ನ್ಯಾಯ ಕೇಳಲು ಹೋರಾಟ ಮಾಡಿದವರ ಮೇಲೆ ಎರಡು ವರ್ಷದ ನಂತರ ಪ್ರಕರಣ ದಾಖಲಾಗಿದೆ. ರೈತರ ಪರ, ಆನೆ ಪರ ಹೋರಾಟ ಮಾಡಿದರು ಪ್ರಕರಣ ದಾಖಲು ಮಾಡಲಾಗುತ್ತಿದೆ.
ಮಲೆನಾಡು ರಕ್ಷಣಾ ಸೇನೆಯ ರಾಜ್ಯ ಗೌರವಾಧ್ಯಕ್ಷರಾದ ಎಡೆಹಳ್ಳಿ .ಆರ್. ಮಂಜುನಾಥ್, ಕಾಡಾನೆ ಸಂರಕ್ಷಣಾ ಸಮಿತಿ ಅಧ್ಯಕ್ಷ ಹುರುಡಿ ವಿಕ್ರಂ ಹಾಗೂ ಕಾಫಿ ಬೆಳೆಗಾರರ ಸಂಘಟನೆಯ ಬೆಕ್ಕನಹಳ್ಳಿ ನಾಗರಾಜ್ ಅವರನ್ನು ಒಳಗೊಂಡಂತೆ ಇನ್ನಿತರ 18 ಜನರ ಮೇಲೆ ಪ್ರಕರಣ ದಾಖಲಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ.
ಎಡೆಹಳ್ಳಿ. ಆರ್. ಮಂಜುನಾಥ್ ಅವರು ಕಳೆದ 15 ವರ್ಷಗಳಿಂದ ನಿರಂತರವಾಗಿ ಕಾಡಾನೆ–ಮಾನವ ಸಂಘರ್ಷದ ವಿರುದ್ಧ ಹೋರಾಟ ನಡೆಸುತ್ತಾ, ಅಧ್ಯಯನ ಮಾಡಿ ವರದಿಗಳನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿರುವ ಹೋರಾಟಗಾರರಾಗಿದ್ದಾರೆ. ತಮ್ಮ ರಾಜಕೀಯ, ಶೈಕ್ಷಣಿಕ ಹಾಗೂ ಧಾರ್ಮಿಕ ಜೀವನದಲ್ಲಿ ಸತ್ಯ–ನ್ಯಾಯ–ಧರ್ಮನಿಷ್ಠೆಯಿಂದ ನಡೆದುಕೊಂಡಿರುವ ಸಜ್ಜನ ವ್ಯಕ್ತಿಯವರಾಗಿದ್ದಾರೆ. ಅವರ ಪೂರ್ವಾಪರ ಹೋರಾಟಗಳನ್ನು ಪರಿಗಣಿಸದೆ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದು ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. ಎರಡು ವರ್ಷಗಳ ಹಿಂದೆ ನಡೆದ ಅರ್ಜುನನ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಕ್ಕಾಗಿ ಈ ಪ್ರಕರಣ ದಾಖಲಿಸಲಾಗಿದೆ. ಇದು ಸಾಂಸ್ಕೃತಿಕ ರಾಯಭಾರಿ ಸಾಕಾನೆ ಅರ್ಜುನನಿಗೆ ಮಾಡಿದ ದ್ರೋಹವಾಗಿಯೂ ಪರಿಗಣಿಸಬೇಕಾಗಿದೆ. 20ಕ್ಕೂ ಹೆಚ್ಚು ಜನರು ಅಂದು ನ್ಯಾಯಯುತವಾಗಿ ಹೋರಾಟ ನಡೆಸಿದ್ದರು. ಆದರೆ ಆ ಹೋರಾಟ ನಡೆದ ಎರಡೂ ವರ್ಷಗಳ ನಂತರ ಹೋರಾಟಗಾರರ ಮೇಲೆಯೇ ಪ್ರಕರಣ ದಾಖಲಿಸಿರುವುದು ಸರ್ಕಾರದ ಲಜ್ಜೆಗೆಟ್ಟ ನೀತಿಯನ್ನು ತೋರುತ್ತದೆ
“ನ್ಯಾಯ ಕೇಳುವುದು ಅಪರಾಧವೇ? ಆನೆ ಸಾವಿನ ಸತ್ಯಾಂಶ ಬಹಿರಂಗಪಡಿಸುವ ಬದಲು ಹೋರಾಟಗಾರರನ್ನು ಗುರಿಯಾಗಿಸಿ ಪ್ರಕರಣ ದಾಖಲಿಸುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ಅರ್ಜುನ ಆನೆಯ ಸಾವಿನ ಹಿಂದೆ ಅರಣ್ಯ ಇಲಾಖೆಯ ಬೇಜವಾಬ್ದಾರಿ ಇರುವ ಸಾಧ್ಯತೆಯನ್ನು ಮರೆಮಾಚಲು ಸರ್ಕಾರ ವಾಮಮಾರ್ಗ ಹಿಡಿದಿದೆ.
ಇದೇ ಸರ್ಕಾರ ಈ ಹಿಂದೆ ರೈತರ ಪರವಾಗಿ ಹೋರಾಟ ನಡೆಸಿದ ನಮ್ಮ ಸಂಘದ ಕಾರ್ಯಕರ್ತರ ಮೇಲೂ ಬಲಪ್ರಯೋಗ ಮಾಡಿ ಪ್ರಕರಣ ದಾಖಲಿಸಿ ಹೋರಾಟದ ದಿಕ್ಕು ತಪ್ಪಿಸಲು ಯತ್ನಿಸಿತ್ತು. ಇದು ಸ್ಪಷ್ಟವಾದ ದ್ವೇಷ ರಾಜಕಾರಣಕ್ಕೆ ಉದಾಹರಣೆಯಾಗಿದೆ. ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನಗಳು ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ವಿರುದ್ಧವಾಗಿವೆ. ಅರ್ಜುನ ಆನೆಯ ಸಾವಿನ ಕುರಿತಾಗಿ ಸ್ವತಂತ್ರ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು, ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು ಹಾಗೂ ಅರಣ್ಯ ಇಲಾಖೆಯ ಹೊಣೆಗಾರಿಕೆಯನ್ನು ನಿಶ್ಚಿತಪಡಿಸಬೇಕು ಎಂದು ಮಲೆನಾಡು ಸೇನೆ ಸರ್ಕಾರವನ್ನು ಒತ್ತಾಯಿಸುತ್ತದೆ.
ನ್ಯಾಯದ ಹೆಸರಿನಲ್ಲಿ ಧ್ವನಿ ಎತ್ತುವವರನ್ನು ದಮನಿಸುವ ಯಾವುದೇ ಕ್ರಮಗಳನ್ನು ಸಂಘ ಖಂಡಿಸುತ್ತದೆ ಎಂದರು.
ಸರ್ಕಾರ ಗಂಭೀರ ಚಿಂತನೆ ನಡೆಸಿ ತಕ್ಷಣವೇ 19 ಜನರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆದು ಹೋರಾಟಗಾರರಿಗೆ ಗೌರವ ಸೂಚಿಸಬೇಕೆಂದು ಮನವಿ ಸಲ್ಲಿಸಲಾಯಿತು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಯ ರೈತ ಘಟಕದ ಅಧ್ಯಕ್ಷ ಪ್ರಸನ್ನ ಮಾತನಾಡಿ ಸರ್ಕಾರದ ಪಾಪದ ಕೊಡ ತುಂಬಿದೆ.ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣಗಳನ್ನು ಸರ್ಕಾರದ ಮಟ್ಟದಲ್ಲಿ ಹಿಂಪಡೆಯಬೇಕು,ಹೋರಾಟ ನಮ್ಮ ಹಕ್ಕಾಗಿದ್ದು ಪ್ರಕರಣವನ್ನು ಹಿಂಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರಾದ ಮಂಜುದೇವ್, ಪ್ರಸನ್ನ, ಗಿರೀಶ್, ನಾಗೇಂದ್ರ ಪಟೇಲ್, ರುದ್ರೇಶ್, ವಿನಯ್, ಯೋಗೇಶ್ ಹಾಗೂ ತೇಜಸ್ ಉಪಸ್ಥಿತರಿದ್ದರು.
The state president of the Malnad Defence Force, Janekere Sagar, has demanded the withdrawal of the false case filed against 18 people, including pro-people activist Edehalli Manjunath










