12.9 C
Munich
Home News ಮಂಡ್ಯ: 17ರಂದು ಉದ್ಯೋಗ ಮೇಳದಲ್ಲಿ ಭಾಗವಹಿಸಲಿ ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

ಮಂಡ್ಯ: 17ರಂದು ಉದ್ಯೋಗ ಮೇಳದಲ್ಲಿ ಭಾಗವಹಿಸಲಿ ಜಿಲ್ಲಾಧಿಕಾರಿ ಡಾ.ಕುಮಾರ ಸಲಹೆ

ಮಂಡ್ಯ: ಮೈಸೂರಿನಲ್ಲಿ ಅ.17ರಂದು ನಡೆಯಲಿರುವ ಬೃಹತ್ ಉದ್ಯೋಗ ಮೇಳದಲ್ಲಿ ಜಿಲ್ಲೆಯ ಸ್ಥಳೀಯ ಕಂಪನಿಗಳ ಭಾಗವಹಿಸುವಿಕೆ ಮುಖ್ಯ.

ಇದರಿಂದಾಗಿ ಜಿಲ್ಲೆಯ ಯುವಕರು ಇಲ್ಲಿಯೇ ಉದ್ಯೋಗ ಪಡೆದು ಜೀವನ ಸಾಗಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಆಯೋಜಿಸಿದ್ದ ಮೈಸೂರಿನ ಬೃಹತ್ ಉದ್ಯೋಗ ಮೇಳದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇಳದಲ್ಲಿ ನಿರುದ್ಯೋಗ ಯುವಕ ಯುವತಿಯರು ಭಾಗವಹಿಸಿ ಉದ್ಯೋಗ ಪಡೆಯಬಹುದಾಗಿದೆ.

ಉದ್ಯೋಗ ಮೇಳದಲ್ಲಿ 198 ಕಂಪನಿ ಭಾಗವಹಿಸುತ್ತಿದ್ದು, ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿರುವ 6,347 ನಿರುದ್ಯೋಗಿಗಳು ತಮ್ಮ ಹೆಸರು ನೋಂದಾಯಿಸಿ ಮೇಳದಲ್ಲಿ ಭಾಗಿಯಾಗಬೇಕು ಎಂದು ತಿಳಿ ಹೇಳಿದರು.

ಉದ್ಯೋಗ ಮೇಳದ ಕುರಿತಾಗಿ ಜಿಲ್ಲೆಯ ಎಲ್ಲ ಕಾಲೇಜುಗಳಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಿ ಹಾಗೂ ಫೋಸ್ಟರ್ ಅಂಟಿಸಿ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿ. ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ನೋಂದಾಯಿಸಿಕೊಳ್ಳುವಂತೆ ನಗರಸಭೆ, ಗ್ರಾಮ ಪಂಚಾಯಿತಿಗಳ ಕಸ ವಿಲೇವಾರಿ ವಾಹನಗಳಲ್ಲಿ ಧ್ವನಿ ವರ್ಧಕಗಳನ್ನು ಬಳಸಿ ಪ್ರಚಾರ ಮಾಡಿ ಎಂದು ತಿಳಿಸಿದರು.

ಜಿಲ್ಲೆಯ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್, ಐಟಿಐ ಕಾಲೇಜಿನಲ್ಲೂ ಜಾಗೃತಿ ಮೂಡಿಸಿ. ಈಗಾಗಲೇ ಉತ್ತೀರ್ಣರಾಗಿ ಹೊರ ಹೋದ ನಿರುದ್ಯೋಗಿಗಳಿಗೂ ಭಾಗವಹಿಸಲು ಸೂಚಿಸಿ.

ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಇದರ ಕುರಿತಾಗಿ ಹೆಚ್ಚಿನ ಪ್ರಚಾರ ಕೈಗೊಳ್ಳಿ. ಉದ್ಯೋಗ ಸಿಗುತ್ತದೆಯೋ ಇಲ್ಲವೋ ಆದರೆ ಭಾಗವಹಿಸುವಿಕೆ ಮುಖ್ಯ.
ಉದ್ಯೋಗ ಮೇಳದಲ್ಲಿ ಸಂದರ್ಶನವನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತಾಗಿ ಕಾರ್ಯಗಾರ ರೂಪಿಸಿ. ಮೇಳಕ್ಕೆ ನೋಂದಾಯಿಸಿಕೊಂಡ ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕೇವಲ ಪ್ರತಿಷ್ಠಿತ ಕಂಪನಿಗಳಿಂದ ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಇರಬೇಕು.

ಯಾವ ಕೌಶಲ ಇರಬೇಕು, ಸಂದರ್ಶನ ಹೇಗೆ ಎದುರಿಸಬೇಕು ಎಂಬುದರ ಕುರಿತಾಗಿ ಉದ್ಯೋಗ ಮೇಳ ನಡೆಯುವ ಮುಂಚಿತವಾಗಿ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ಕಾರ್ಯಾಗಾರ ಅಯೋಜಿಸಿ. ಇದರಿಂದ ಜಿಲ್ಲೆಯ ನಿರುದ್ಯೋಗಿ ಯುವಕ ಯುವತಿಯರಿಗೆ ಸಹಕಾರವಾಗುತ್ತದೆ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ನಾಗನಂದ, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಗೀತಾ, ನಗರಾಭಿವೃದ್ಧಿ ಕೋಶಾಧಿಕಾರಿ ನರಸಿಂಹಮೂರ್ತಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ದಿನೇಶ್, ಪೌರಾಯುಕ್ತೆ ಪಂಪಾಶ್ರೀ ಇತರರಿದ್ದರು.

error: Content is protected !!