ಚನ್ನರಾಯಪಟ್ಟಣ: ನ.1 ರಿಂದ ಶ್ರೀಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ

The Jatra Mahotsava of Sri Basaveshwara Swamy will be held with great pomp and show for 5 days from Saturday, November 1st to Wednesday, November 5th at the legendary Srikshetra Kabali in the taluk.

ಚನ್ನರಾಯಪಟ್ಟಣ: ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿಯ ಜಾತ್ರಾ ಮಹೋತ್ಸವವು ನ.1 ಶನಿವಾರದಿಂದ ನ‌.5 ಬುಧುವಾರದವರೆಗೆ 5 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.

ನ‌.1 ಶನಿವಾರ ಬೆಳಗ್ಗೆ ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಮಂಡಕನಹಳ್ಳಿ ಗ್ರಾಮಸ್ಥರಿಂದ ದೇಗುಲಕ್ಕೆ ಹೂವಿನ ಚಪ್ಪರ ಕಾರ್ಯ ಜರುಗಲಿದ್ದು ಪ್ರಾತಃಕಾಲದಲ್ಲಿ ಗೋ ಪೂಜೆ, ವಿಘ್ನೇಶ್ವರ ಪೂಜೆ, ಶ್ರೀ ಬಸವೇಶ್ವರ ಸ್ವಾಮಿಗೆ ರುದ್ರಾಭಿಷೇಕ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ.

ಬೆಳಗ್ಗೆ 8:30 ರಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಸನ್ನಿಧಿಯ ಆವರಣದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ ಶ್ರೀ ಬಸವೇಶ್ವರಸ್ವಾಮಿ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ನ.2 ಭಾನುವಾರ ಬೆಳಗ್ಗೆ ಶ್ರೀ ಬಸವೇಶ್ವರಸ್ವಾಮಿಗೆ ವಿಶೇಷ ಅಲಂಕಾರ, ದೀಪದಾರತಿ ಹಾಗೂ ವಿಶೇಷ ಪೂಜಾ ವಿಧಿ ವಿಧಾನಗಳು ಜರುಗಲಿದ್ದು, ಸಂಜೆ 6.30 ರಿಂದ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನ.3 ಸೋಮವಾರ ಬೆಳಗ್ಗೆ ಶ್ರೀ ಬಸವೇಶ್ವರ ಸ್ವಾಮಿ ಬಂಡಿ ಉತ್ಸವ, ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದ್ದು, ಚುಂಚಶ್ರೀಗಳ ದಿವ್ಯಸಾನಿಧ್ಯದಲ್ಲಿ ಬೆಂಗಳೂರಿನ ಉದ್ಯಮಿ ಶ್ರೀಮತಿ ಪ್ರದೀಪಾ, ಶ್ರೀ ವೆಂಕಟೇಶ ಪ್ರಸಾದ್ ಕುಟುಂಬದವರಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಲಿದೆ.

ಸಂಜೆ ಸುಮಾರಿಗೆ ಶ್ರೀ ಬಸವೇಶ್ವರಸ್ವಾಮಿ ಸರ್ಪೋತ್ಸವ, ಶ್ರೀ ಚೌಡೇಶ್ವರಿದೇವಿ ಉತ್ಸವ, ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪುತ್ತಳಿಕೆ, ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಮುತ್ತಿನ ಪಲ್ಲಕ್ಕಿ ಉತ್ಸವ, ನಂತರ ದೇಗುಲದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಚುಂಚಶ್ರೀಗಳ ತೆಪ್ಪೋತ್ಸವ ವೈಭವದಿಂದ ಸಾಗಲಿದೆ. ನಂತರ ಧಾರ್ಮಿಕ ಸಭೆ ನಡೆಯಲಿದೆ.

ನ.4 ಮಂಗಳವಾರ ಬೆಳಗ್ಗೆ ಶ್ರೀ ಬಸವೇಶ್ವರ ಸ್ವಾಮಿಗೆ ಬೆಣ್ಣೆ ಅಲಂಕಾರ ಹಾಗೂ ವಿಶೇಷ ಪೂಜೆಗಳೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ಭಕ್ತರಿಂದ ಬಸವೋತ್ಸವ ಹಾಗೂ ಸಂಜೆ ಸುಮಾರಿನಲ್ಲಿ ಖ್ಯಾತ ವಾಗ್ಮಿ ಶಿವಾರ ಉಮೇಶ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ನ.5 ಬುಧವಾರ ಬೆಳಗ್ಗೆ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಯವರು ಶ್ರೀ ಬಸವೇಶ್ವರಸ್ವಾಮಿಗೆ ವಿವಿಧ ಅಭಿಷೇಕ, ಕುಂಕುಮಾರ್ಚನೆ, ಪುಷ್ಪರ್ಚನೆ ಹಾಗೂ ಮುತ್ತಿನಾರತಿಯೊಂದಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಿದ್ದಾರೆ. ಸಂಜೆ 5 ಗಂಟೆಗೆ ಸಲ್ಲುವ ಗೋಧೂಳಿ ಲಗ್ನದಲ್ಲಿ ಧರ್ಮಧ್ವಜ ಅವರೋಹಣ ನೆರವೇರಲಿದ್ದು, ಶ್ರೀ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಊರಿನ ರಾಜಬೀದಿಯಲ್ಲಿರುವ ಮೆರೆವಿಗ್ರಹ ದೇಗುಲಕ್ಕೆ ಉತ್ಸವ ಮೂರ್ತಿಯನ್ನು ಗುಡಿದುಂಬಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.

ಸುತ್ತಮುತ್ತಲಿನ ಗ್ರಾಮಗಳಿಂದ ರೈತರು ತಮ್ಮ ಜಾನುವಾರುಗಳನ್ನು ಶ್ರೀ ಕ್ಷೇತ್ರದ ಸನ್ನಿಧಿಗೆ ಕರೆತಂದು ದೇಗುಲದ ಸುತ್ತ ಪ್ರದಕ್ಷಣೆ ಮಾಡಿಸಿ ತೀರ್ಥ ಪ್ರೇಕ್ಷಣೆಯೊಂದಿಗೆ ದೇವರ ಕೃಪೆಗೆ ಪಾತ್ರರಾಗಲಿದ್ದಾರೆ. ಬೆಂಗಳೂರು, ಮೈಸೂರು, ಭದ್ರಾವತಿ, ಶಿವಮೊಗ್ಗ, ಹಾವೇರಿ ಸೇರಿದಂತೆ ವಿವಿಧ ಕಡೆಯಿಂದ ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುವುದು ವಿಶೇಷವಾಗಿದೆ.

ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಪ್ರತಿವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದು ನೀರು, ನೆರಳು ಹಾಗೂ ಅನ್ನದಾಸೋಹದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಎಂದಿನಂತೆಯೇ ಮಾಡಲಾಗುವುದು ಎಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದ್ದಾರೆ.