ಹಾಸನದಲ್ಲಿ ರೈತರ ಗೆಲುವು: ಮೆಕ್ಕೆಜೋಳಕ್ಕೆ ₹2400 ಬೆಂಬಲ ಬೆಲೆ ಭರವಸೆ – ಐದು ದಿನಗಳ ಪ್ರತಿಭಟನೆ ವಾಪಸ್

The indefinite protest by the State Farmers' Association and the Green Army, demanding a support price of Rs. 2400 per quintal of maize, has received a positive response for the past five days.

ಹಾಸನ: ಪ್ರತಿ ಕ್ವಿಂಟಾಲ್‌ ಮೆಕ್ಕೆ ಜೋಳಕ್ಕೆ 2400 ರೂ. ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಕಳೆದ ಐದು ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶುಕ್ರವಾರ ಪ್ರತಿಭಟನೆ ವಾಪಾಸ್‌‍ ಪಡೆಯಲಾಯಿತು.

ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸ್ಥಳಕ್ಕೆ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಸಂಸದ ಶ್ರೇಯಸ್‌‍ ಪಟೇಲ್‌ ಅವರು ಭೇಟಿ ನೀಡಿ ಮನವಿ ಆಲಿಸಿದರು. ನಂತರ ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ತಿಪ್ಪೇಸ್ವಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಶಿವಲಿಂಗೇಗೌಡ ಅವರು, ಜಿಲ್ಲೆಗೆ ವಾರ್ಷಿಕ ಪಶು ಆಹಾರಕ್ಕೆ 38 ಸಾವಿರ ಟನ್‌ ಮೆಕ್ಕೆ ಜೋಳದ ಅವಶ್ಯಕತೆಯಿದೆ.

ಈ ಬಾರಿ ಬಿಳಿಸುಳಿ ರೋಗದಿಂದ ಇಳುವರಿ ಕಡಿಮೆಯಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕೆಎಂಎಫ್‌ ಬೆಂಬಲ ಬೆಲೆಯಡಿ ಜೋಳ ಖರೀದಿಸಬೇಕೆಂದರು.
ಅದಕ್ಕೆ ಪ್ರತಿಕ್ರಿಯಿಸಿದ ತಿಪ್ಪೇಸ್ವಾಮಿ ಅವರು, ಪ್ರತಿ ರೈತರಿಂದ 50 ಕ್ವಿಂಟಾಲ್‌ ಮೆಕ್ಕೆಜೋಳ ಖರೀದಿಸುವ ಭರವಸೆ ನೀಡಿದರು.

ಮೆಕ್ಕೆಜೋಳ ಸರಬರಾಜು ಮಾಡುವ ರೈತರು ಸರ್ಕಾರದ ಫ್ರೂಟ್‌ ಐಡಿ ಹೊಂದಿರಬೇಕು ಅಥವಾ ಕ್ಷೀರಸಿರಿ ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಬಳಸುವ ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಫ್ರೂಟ್‌ ಐಡಿಯಲ್ಲಿ ರೈತರು ತಮ್ಮ ಬ್ಯಾಂಕ್‌ ಖಾತೆ ನೋಂದಣಿ ಮಾಡಿಸಿರಬೇಕು.

ಜೋಳವನ್ನು ಸರಬರಾಜು ಮಾಡುವ ಮೊದಲು ಪಶು ಆಹಾರ ಘಟಕಕ್ಕೆ ಸ್ಯಾಂಪಲ್‌ ನೀಡಿ ತಪಾಸಣೆ ಮಾಡಿಸಬೇಕು. ಆ ಬಳಿಕಷ್ಟೇ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದೆಂದು ತಿಳಿಸಿದರು.

ಈ ಎಲ್ಲಾ ಷರತ್ತುಗಳಿಗೆ ಒಪ್ಪಿದ ರೈತರು ಸರ್ಕಾರದ ನಿರ್ಧಾರ ಸ್ವಾಗತಿಸಿ ಪ್ರತಿಭಟನೆ ವಾಪಾಸ್‌‍ ಪಡೆದರು.

ಸಚಿವರು ಬಾರದಿದ್ದಕ್ಕೆ ರಸ್ತೆ ತಡೆ:
ಮುಖ್ಯಮಂತ್ರಿ ಕಾರ್ಯಕ್ರಮ ಹಿನ್ನಲೆಯಲ್ಲಿ ಪೂರ್ವ ಸಿದ್ಧತೆಗಾಗಿ ನಗರಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುತ್ತಾರೆಂದು ರೈತ ಮುಖಂಡರು ಭಾವಿಸಿದ್ದರು. ಆದರೆ ಸಂಜೆಯಾದರೂ ಸಚಿವರು ಬಾರದ ಹಿನ್ನಲೆಯಲ್ಲಿ ಬಿಎಂ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರ ತಿಳಿದ ಶಾಸಕ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್‌‍ ಪಟೇಲ್‌ ಸ್ಥಳಕ್ಕಾಗಮಿಸಿದರು.
ರೈತ ಸಂಘದ ಕಾರ್ಯದರ್ಶಿ ಸ್ವಾಮಿಗೌಡ ಅವರು ಮಾತನಾಡಿ, ಕಳೆದ ಐದು ದಿನಗಳಿಂದ ಜೋಳಕ್ಕೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ಹೋರಾಟ ನಡೆಸಿದ್ದೇವೆ.

ನಮ್ಮ ಬೇಡಿಕೆಯಂತೆ 2400 ರೂ. ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿಸುವುದಾಗಿ ಕೆಎಂಎಫ್‌ ಅಧಿಕಾರಿಗಳು ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ವಾಪಾಸ್‌‍ ಪಡೆಯುತ್ತಿದ್ದೇವೆ. ಜಿಲ್ಲೆಯ ರೈತರು ಜೋಳ ಮಾರಾಟ ಮಾಡುವ ಮೂಲಕ ನಷ್ಟದಿಂದ ಪಾರಾಗಬೇಕು. ಖರೀದಿ ವೇಳೆ ಯಾವುದೇ ಅಕ್ರಮ ಅಥವಾ ಲೋಪ ಕಂಡುಬಂದರೆ ತಕ್ಷಣ ನಮ್ಮ ಗಮನಕ್ಕೆ ತರಬೇಕು. ಕೊಟ್ಟ ಮಾತಿನಂತೆ ಸರ್ಕಾರ ಖರೀದಿ ಮಾಡದಿದ್ದರೆ ಮತ್ತೆ ಪ್ರತಿಭಟನೆ ಹಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಲ್ಲಾಧಿಕಾರಿ ಕೆ.ಎಸ್‌‍.ಲತಾಕುಮಾರಿ, ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್‌ ಮೂರ್ತಿ, ತಾಲ್ಲೂಕು ಅಧ್ಯಕ್ಷ ಮಂಜು, ಮನು, ರವಿ, ವೆಂಕಟರಾಮು, ಹಳೇಬೀಡು ರಾಜಣ್ಣ, ಹಾಲಪ್ಪ, ನಂಜಪ್ಪ, ತೀರ್ಥ ಪ್ರಸಾದ್‌ ಹಾಗು ಇತರರಿದ್ದರು.