ಬೇಲೂರು: ಪಟ್ಟಣದ ಪುರಸಭೆ ಆವರಣದಲ್ಲಿರುವ ದೇವಾಲಯದಲ್ಲಿ ಗಣೇಶ ವಿಗ್ರಹದ ಮೇಲೆ ಚಪ್ಪಲಿ ಇಡಲ್ಪಟ್ಟಿರುವ ಘಟನೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೊಲೀಸರು ಗಟ್ಟಿಯಾದ ತನಿಖೆ ಕೈಗೊಂಡಿದ್ದಾರೆ.
ಈ ಕುರಿತು ಹಾಸನ ಜಿಲ್ಲಾ ಎಸ್ಪಿ ಮಹಮದ್ ಸುಜೇತಾ ಸುದ್ದಿಗೋಷ್ಠಿ ನಡೆಸಿ ಘಟನೆಗೆ ಸಂಬಂಧಿಸಿದ ವಿವರಗಳನ್ನು ಹಂಚಿಕೊಂಡರು.
- ಈ ಕೃತ್ಯ ರಾತ್ರಿ ವೇಳೆಯಲ್ಲಿ ನಡೆದಿದೆ ಎಂದು ಎಸ್ಪಿ ತಿಳಿಸಿದ್ದಾರೆ.
- ಒಬ್ಬ ಮಹಿಳೆ ದೇವಾಲಯಕ್ಕೆ ಹೋಗಿ ವಾಪಸ್ ಬಂದಿರುವುದು ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಸ್ಪಷ್ಟವಾಗಿದೆ.
- ಆಕೆಯ ಕಾಲಿನಲ್ಲಿ ಇದ್ದ ಚಪ್ಪಲಿಯೇ ದೇವರ ಮೇಲೆ ಪತ್ತೆಯಾಗಿದೆ ಎಂಬ ಪ್ರಾಥಮಿಕ ಮಾಹಿತಿ ದೊರೆತಿದೆ.
- ಮಹಿಳೆ ಮಾನಸಿಕವಾಗಿ ಸ್ಥಿರವಾಗಿಲ್ಲ ಎಂಬ ಸುಳಿವು ಪೊಲೀಸರಿಗೆ ಲಭ್ಯವಾಗಿದೆ.
- ಆಕೆ ಮೂಲತಃ ಎಲ್ಲಿಯವರು, ಯಾಕೆ ಹೀಗೆ ವರ್ತಿಸಿದರು ಎಂಬುದು ಇನ್ನೂ ಖಚಿತವಾಗಿಲ್ಲ.
ಎಸ್ಪಿ ಸುಜೇತಾ ಅವರ ಪ್ರಕಾರ, ಮಹಿಳೆಯನ್ನು ಪತ್ತೆಹಚ್ಚಲು ಎಂಟು ತನಿಖಾ ತಂಡಗಳನ್ನು ರಚಿಸಲಾಗಿದೆ. ಸ್ಥಳೀಯರ ಪ್ರಕಾರ ಆಕೆ ಆಗಾಗ ಬೇಲೂರಿನಲ್ಲಿ ಓಡಾಡುತ್ತಿದ್ದರೆಂಬ ಮಾಹಿತಿ ಲಭ್ಯವಾಗಿದೆ. ದೇವರ ಮೇಲಿದ್ದ ಹೂಗಳನ್ನು ತೆಗೆದು ಮಾರಾಟ ಮಾಡುತ್ತಿದ್ದಾಳೆ ಎಂಬುದೂ ಕೆಲವು ಮಂದಿ ಹೇಳಿದ್ದಾರೆ.
“ಚಪ್ಪಲಿಗೆ ದಾರ ಕಟ್ಟಿ ಹಾಕಿದ ಘಟನೆ ಅಲ್ಲ, ಎರಡು ಚಪ್ಪಲಿಗಳನ್ನು ನೇರವಾಗಿ ವಿಗ್ರಹದ ಮೇಲೆ ಇಡಲಾಗಿದೆ ಎಂಬುದು ಪರಿಶೀಲನೆಯಲ್ಲಿ ಗೊತ್ತಾಗಿದೆ” ಎಂದು ಎಸ್ಪಿ ಸುಜೇತಾ ತಿಳಿಸಿದರು.
ಮಹಿಳೆಯನ್ನು ಶೀಘ್ರ ವಶಕ್ಕೆ ಪಡೆಯಲು ಪೊಲೀಸರು ತೀವ್ರ ಕ್ರಮ ಕೈಗೊಂಡಿದ್ದಾರೆ.










