- ಹಾಸನ: ಮನುಷ್ಯನ ದೇಹವೇ ದೇವಾಲಯ, ಶಿರವೇ ಕಳಸ. ಈ ಭಾವನೆಗೆ ಜೀವ ತುಂಬಿದವರು ಬಸವಣ್ಣನವರು ಎಂದು ಗದಗದ ಯಡಿಯೂರು ಶ್ರೀ ತೊಂಟದರ್ಯ ಸಂಸ್ಥಾನ ಮಠದ ಮಠಾಧೀಶರಾದ ಶ್ರೀ ಡಾ.ತೊಂಟದ ಸಿದ್ದರಾಮ ಮಹಾಸ್ವಾಮೀಜಿ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರ ಭಾನುವಾರ ನಡೆದ ವಿಶ್ವಗುರು ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕನೆಂದು ರಾಜ್ಯ ಸರ್ಕಾರ ಘೋಷಿಸಿ ಒಂದು ವರ್ಷ ಪೂರೈಸಿದ ಹಿನ್ನೆಲೆ ಬಸವ ಸಂಸ್ಕೃತಿ ಅಭಿಯಾನ ರಥಯಾತ್ರೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.
ದೇವಾಲಯಕ್ಕೆ ಹೋಗುವುದೇ ಧರ್ಮವಲ್ಲ, ಇಷ್ಟಲಿಂಗವೇ ಶಾಶ್ವತ ದೇವಾಲಯ. ಪೂಜಾರಿ ಮಾಡಿದ ಪೂಜೆಯ ಬದಲು ಪ್ರತಿಯೊಬ್ಬರೂ ತಾವೇ ಮಾಡುವ ಪೂಜೆಯೇ ನಿಜವಾದ ಧರ್ಮಾಚರಣೆ ಇದನ್ನು ಬಸವಣ್ಣನವರು ಕೊಟ್ಟ ಸಂದೇಶ ಎಂದು ಹೇಳಿದರು.
ದೇಹವೇ ದೇಗುಲವಿದೆ. ಶಿರವೆ ಒಂದು ಕಳಸ, ಈ ಪ್ರಚಾರಕ್ಕಾಗಿಯೇ ಬಸವ ಸಂಸ್ಕೃತಿಯ ಅಧ್ಯಾಯನ ಹೊರಟಿದೆ ಎಂಬುವುದನ್ನು ತಿಳಿದುಕೊಳ್ಳಬೇಕು. ನಾವು ಹೆಚ್ಚೆಚ್ಚು ಪ್ರಚಾರ ಮಾಡಿದರೆ ನಮ್ಮ ಸಂಸ್ಕೃತಿ ಬಗ್ಗೆ ತಿಳಿಯುತ್ತದೆ. ದೇವಾಲಯಕ್ಕೆ ಹೋಗುವ ಸಂಖ್ಯೆ ಕಡಿಮೆ ಆಗಲು ನಾವು ಜಾಗೃತಿ ಮಾಡಬೇಕು ಎಂದು ಹೇಳಿದರು.
ಮನೆ ಮನೆ ಒಳಗೆ ಜಾಗೃತಿ ಮಾಡುವ ಅವಶ್ಯಕತೆ ಇದೆ. ಇಷ್ಟ ಲಿಂಗವನ್ನು ಬಸವಣ್ಣನವರು ಕೊಟ್ಟಿದ್ದು, ಪೂಜಾರಿ ಪೂಜೆ ಮಾಡಿದರೇ ನಿಮಗೆ ಪ್ರಯೋಜನವಿಲ್ಲ. ನಾವು ಯಾವಾಗ ಬೇಕು ಆವಾಗ ಪೂಜೆ ಮಾಡಬಹುದು. ಕರೊನಾ ಸಮಯದಲ್ಲಿ ಎಲ್ಲಾ ದೇವಾಲಯಗಳ ಬಾಗಿಲುಗಳು ಮುಚ್ಚಿದ್ದಾಗಲೂ, ಜನರ ಹೃದಯದಲ್ಲಿದ್ದ ಇಷ್ಟಲಿಂಗವೇ ತೆರೆದಿತ್ತು. ಬಸವಣ್ಣನವರ ದಾರಿ ಅದು ರಾಜ ಮತ್ತು ಸತ್ಯದ ಮಾರ್ಗವಾಗಿತ್ತು. ಸಮಾನಮಾಜವನ್ನು, ಸಮಾನತೆಯನ್ನು ಸ್ಥಾಪಿಸುವುದು ಬಸವಣ್ಣನವರ ಉದ್ದೇಶವಾಗಿತ್ತು. ಮನುಷ್ಯರೆಲ್ಲರೂ ಒಂದೆ ಎಂಬುದರ ಸಂದೇಶ ಕೊಡಬೇಕಾಗಿತ್ತು. ಇದರಿಂದಲೇ ಜಾತಿ ಜಾತಿ ನಡುವೆ ಸಾಮರಸ್ಯ ಸಾಧಿಸಲು ಮುಂದಾದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸ್ವಾಮೀಜಿಗಳಿಗೆ ತತ್ವಸಂಬಂಧಿ ಹಲವಾರು ಪ್ರಶ್ನೆಗಳನ್ನು ಕೇಳಿದರು.ಇಂದಿನ ಯುಗದಲ್ಲಿ ಬಸವಣ್ಣನವರ ಸಂದೇಶ ಹೇಗೆ ಪ್ರಸ್ತುತ? ಜಾತಿ ಭೇದ ನಿವಾರಣೆಗೆ ಏನು ಮಾಡಬೇಕು? ಎಂಬಂತಹ ಪ್ರಶ್ನೆಗಳಿಗೆ ಸ್ವಾಮೀಜಿಗಳು ತಾಳ್ಮೆಯಿಂದ ಉತ್ತರಿಸಿ, ಸತ್ಯ ಮತ್ತು ಧರ್ಮದ ಮಾರ್ಗವೇ ಸಮಾಜಕ್ಕೆ ಬೆಳಕು ಎಂದು ತಿಳಿಸಿದರು.
ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಅನುಭವ ಮಂಟಪವನ್ನು 12ನೇ ಶತಮಾನದಲ್ಲಿ ದಯಪಾಲಿಸಿದವರು ಬಸವಣ್ಣನವರು. ಈ ಪ್ರಪಂಚದ ಜನಸಂಖ್ಯೆ 850 ಕೋಟಿ ಇದ್ದು, ಅದರಲ್ಲಿ ಭಾರತದ ನಮ್ಮ ಜನಸಂಖ್ಯೆ 150 ಕೋಟಿ ಇದೆ. ಒಂದು ಗಟ್ಟಿತನದ ಪ್ರಜಾಪ್ರಭುತ್ವ ಎಂಬುದು ತಳಹದಿಗೆ ಬಸವೇಶ್ವರರ ಆಶೀರ್ವಾದ ನಮ್ಮೆಲ್ಲರಿಗೂ ಕೂಡ ಅವಕಾಶವಾಗಿದೆ. ಶ್ರೀಮಠಗಳ ಆಶೀರ್ವಾದದಿಂದ ಧರ್ಮದ ಜಾಗೃತಿ, ಸಾಮಾಜಿಕ ಪ್ರಗತಿ ಆಗಿದ್ದು, ಶೈಕ್ಷಣಿಕ ಪ್ರಗತಿಯಾಗಿ ನಮ್ಮ ದೇಶ ಅಭಿವೃದ್ಧಿ ಪಥದಲ್ಲಿ ಹೋಗುತ್ತಿದೆ ಎಂದರೇ ಇಂತಹ ಪರಮಪೂಜ್ಯರ ಆಶೀರ್ವಾದದಿಂದ ಮಾತ್ರ ಎಂದರು. ಇಂತಹ ಮಹತ್ವವಾದದ ಕಾರ್ಯಕ್ರಮದಲ್ಲಿ ಸಂವಾದ ಕಾರ್ಯಕ್ರಮ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಬಸವೇಶ್ವರರ ಸಂದೇಶಗಳನ್ನ ತಿಳಿಸಬೇಕಾಗಿದ್ದು, ಶ್ರೀ ಬಸವೇಶ್ವರರ ಪುತ್ಥಳಿಯನ್ನು ಹಾಸನದಲ್ಲಿ ಕೂಡ ನಿರ್ಮಾಣ ಮಾಡಲು ಶಾಸಕ ಎಚ್.ಪಿ. ಸ್ವರೂಪ್ ಕೂಡ ಚಿಂತನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಚನ್ನರಾಯಪಟ್ಟಣದಲ್ಲೂ ಕೂಡ ಪ್ರತಿಮೆ ನಿಮಾಣ ಮಾಡಲು ಮುಂದಾಗಿ ಅನಾವರಣ ಮಾಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸ್ವಾಮೀಜಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಶಕ್ತಿ ಬಂದಂತಾಗಿದೆ. ಮಹಾಲಯ ಅಮವಾಸ್ಯೆ ವಿಶೇಷ ದಿನದಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವಗುರು, ಜಗಜ್ಯೋತಿ ಬಸವಣ್ಣನವರ ಸಾಂಸ್ಕೃತಿಕ ಅಭಿಯಾನ ಕಾರ್ಯಕ್ರಮದಲ್ಲಿ ಸಾವಿರಾರು ಜನರು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಮಾಜದ ಗಣ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಿದ್ಯಾರ್ಥಿಗಳಿಂದ ಕೇಳಿದ ಪ್ರತಿಯೊಂದು ಪ್ರಶ್ನೆಗೂ ಸ್ವಾಮೀಜಿಗಳಿಂದ ಬಂದ ಉತ್ತರ ಸಭಿಕರ ಮನಸ್ಸಿನಲ್ಲಿ ಸ್ಫೂರ್ತಿಯ ಅಲೆಗಳನ್ನು ಎಬ್ಬಿಸಿತು. ಇದಕ್ಕೆ ಮೊದಲು ಬಸವಣ್ಣನವರ ರಥ ಯಾತ್ರೆ ಆಗಮಿಸಿದಾಗ ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಂಡರು.
ಶಾಸಕ ಹೆಚ್.ಪಿ. ಸ್ವರೂಪ್, ಸಾಣೇನಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬಾಲ್ಕಿ ಹಿರೇಮಠದ ಶ್ರೀ ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಗುರುಬಸವ ಮಹಾಸ್ವಾಮೀಜಿ, ಶಿವಾನಂದ ಮಹಾಸ್ವಾಮೀಜಿ, ಜ್ಞಾನಪ್ರಭು ಸಿದ್ದರಾಮ ದೇಸಿ ಕೇಂದ್ರ ಮಹಾಸ್ವಾಮೀಜಿ, ಶ್ರೀ ರುದ್ರಮುನಿ ಮಹಾಸ್ವಾಮೀಜಿ, ಶ್ರೀ ಸಂಗಮೇಶ್ವರ ಮಹಾಸ್ವಾಮೀಜಿ, ಪುಷ್ಪಗಿರಿ ಮಠದ ಶ್ರೋ ಸೋಮಶೇಖರ ಸ್ವಾಮೀಜಿ, ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಮಹಾಸ್ವಾಮೀಜಿ, ಶ್ರೀ ಜಯಚಂದ್ರಶೇಖರ ಮಹಾಸ್ವಾಮೀಜಿ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ನವೀಲೆ ಪರಮೇಶ್, ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಯು. ಬಸವರಾಜು, ಕುಮಾರಸ್ವಾಮಿ ಇತರರು ಉಪಸ್ಥಿತರಿದ್ದರು.
ಹಾಸನ:ಬಸವ ಸಂಸ್ಕೃತಿ ಅಭಿಯಾನ ರಥಯಾತ್ರೆ – ವಿದ್ಯಾರ್ಥಿಗಳೊಂದಿಗೆ ಸಂವಾದ
The human body is the temple, the head is the pot. Basavanna was the one who brought this sentiment to life, said Sri Dr. Tontadarya Sansthan Matha, the abbot of Yediyur Sri Tontadarya Sansthan Matha in Gadag.










