ಹಾಸನ: ಬೋರ್ ವೆಲ್ ಕೊರೆಯುವ ಬಿಟ್ ದರ ಹೆಚ್ಚಳ ಖಂಡಿಸಿ ಹಾಸನ ಜಿಲ್ಲಾ ಬೋರ್ ವೆಲ್ ರಿಗ್ ಮಾಲೀಕರು ಹಾಗೂ ಏಜೆಂಟರ ಸಂಘದ ವತಿಯಿಂದ ನಗರದ ಡೈರಿ ವೃತ್ತದ ಬಳಿ ಇರುವ ಎಸ್.ಎಂ.ಕೆ ನಗರ ಲೇಔಟ್ ಬಳಿ ಲಾರಿಗಳನ್ನು ನಿಲ್ಲಿಸಿಕೊಂಡು ಪ್ರತಿಭಟನೆ ನಡೆಸಿದರು.
ಕಳೆದ ಎರಡು ದಿನಗಳಿಂದ ನಿರಂತರ ಪ್ರತಿಭಟನೆ ಹಮ್ಮಿಕೊಂಡಿರುವ ರಿಗ್ ಲಾರಿ ಮಾಲೀಕರು ಹಾಗೂ ಏಜೆಂಟರು ಬಿಟ್ ದರ ಹಾಗೂ ಹ್ಯಾಮರ್ ಬೆಲೆ ಹೆಚ್ಚಳದಿಂದ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ತಮ್ಮ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಜ.1 ರಿಂದ ಬೋರ್ ವೆಲ್ ಕೊರೆಯುವ ಲಾರಿಗಳ ಬಿಟ್ ದರ 26 ಸಾವಿರ ರೂ. ನಿಂದ ಏಕಾಏಕಿ 48 ಸಾವಿರ ರೂ. ಗೆ ಏರಿಕೆಯಾಗಿದ್ದು ಇದರಿಂದ ರಿಗ್ ಲಾರಿ ಮಾಲೀಕರಿಗೆ ಆಘಾತ ಉಂಟಾಗಿದೆ ಎಂದರು.
ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆ ನೆಪದಲ್ಲಿ ಬಿಟ್ ಕಂಪನಿಗಳು ಬಿಟ್ ದರ ಏರಿಕೆ ಮಾಡಿದೆ. ಇದರಿಂದ ಬೋರ್ ವೆಲ್ ಕೊರೆಯುವ ದರವು ಅನಿವಾರ್ಯವಾಗಿ ಹೆಚ್ಚಳವಾಗಲಿದೆ ಇದರ ಪರಿಣಾಮ ರೈತರಿಗೂ ಹೊರೆ ಆಗಲಿದೆ ಸರ್ಕಾರಗಳು ಮಧ್ಯಪ್ರವೇಶ ಮಾಡಿ ಬಿಟ್ ದರ ಕಡಿಮೆ ಮಾಡಿದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.
ಖಜಾಂಚಿ ಶಿವಣ್ಣ ಮಾತನಾಡಿ, ಪ್ರತಿ ವರ್ಷ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುವುದು ಸಹಜ ಆದರೆ ಬಿಟ್ ಮತ್ತು ಹ್ಯಾಮರ್ ದರ ಯಾರು ನಿರೀಕ್ಷಿಸಲಾಗದಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಇದರಿಂದ ರಿಗ್ ಲಾರಿ ಮಾಲೀಕರಿಗೂ ಸಮಸ್ಯೆಯಾಗುತ್ತದೆ. ರೈತರಿಗೂ ಸಮಸ್ಯೆಯಾಗುತ್ತದೆ ಎಂದರು.
ಇನ್ನೂ ಎರಡು ದಿನ ಕಾದು ನೋಡಿ ಬಿಟ್ ದರ ಕಡಿಮೆಯಾಗದಿದ್ದರೆ ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಚರ್ಚಿಸಿ ಬಳಿಕ ಬೋರ್ ವೆಲ್ ಕೊರೆಯಲು ದರ ನಿಗದಿ ಮಾಡಲಾಗುವುದು. ಬೆಲೆ ಹೆಚ್ಚಳ ಮಾಡುವುದು ನಮ್ಮ ಉದ್ದೇಶ ಅಲ್ಲ, ಆದರೆ ಬಿಟ್ ದರ ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿದೆ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪುನೀತ್, ಉಪಾಧ್ಯಕ್ಷ ಉಮೇಶ್, ಸಂಘದ ಪದಾಧಿಕಾರಿಗಳು ಇದ್ದರು.
The Hassan District Borewell Rig Owners and Agents Association protested by parking trucks near SMK Nagar Layout near the city’s Dairy Circle, condemning the increase in borewell drilling bit prices.










