ಹಾಸನ: ಸರ್ಕಾರಿ ಶಾಲೆಗಳನ್ನು ಕೊಲ್ಲುವ ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆಯನ್ನು ಕೂಡಲೇ ಕೈಬಿಡುವಂತೆ ನಗರದಲ್ಲಿಂದು ನಡೆದ ಪ್ರಥಮ ಎಐಡಿಎಸ್‌ಒ ವಿದ್ಯಾರ್ಥಿ ಜಿಲ್ಲಾ ಸಮ್ಮೇಳನ ಆಗ್ರಹಿಸಿದೆ.
ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆದ ಸಮ್ಮೇಳನವನ್ನು ಪರಿಷತ್ ಅಧ್ಯಕ್ಷ, ಡಾ. ಹೆಚ್.ಎಲ್.ಮಲ್ಲೇಶಗೌಡ ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಸರ್ಕಾರ ಹೊಸ ಕೆಪಿಎಸ್ ಮ್ಯಾಗ್ನಟ್ ಶಾಲೆಗಳನ್ನು ತೆರೆದು, ಹಾಲಿ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ ಎಂದರು. ಶಾಲೆ ಉಳಿಸಲು ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಮಾಡುತ್ತಿರುವ ಹೋರಾಟಕ್ಕೆ ಅಭಿನಂದನೆ ಸಲ್ಲಿಸಿದರು.
ಕೆಪಿಎಸ್ ಮ್ಯಾಗ್ನಟ್ ಯೋಜನೆ ಅಡಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಯೋಜನೆ ಖಂಡಿಸಿ, ಸರ್ಕಾರಿ ಶಾಲೆಗಳಿಗೆ ಹೆಚ್ಚು ಹೆಚ್ಚು ಅನುದಾನ ಹಾಗೂ ಮೂಲ ಸೌಕರ್ಯ ಒದಗಿಸಲು ಸರ್ಕಾರ ಮುಂದಾಗಬೇಕು. ಆದರೆ ಬೇರೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ.
ಇಂದು ಸರ್ಕಾರಿ ಶಾಲೆ ಅಭಿವೃದ್ಧಿ ಪಡಿಸುವ ಮಾತುಗಳು ಕೇವಲ ಹಾಳೆಯ ಮೇಲಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಮಹತ್ವದ ಜವಾಬ್ದಾರಿ ಎಲ್ಲಾ ಶಿಕ್ಷಣ ಪ್ರೇಮಿ ಜನತೆಯ ಹಾಗೂ ಪೋಷಕರ ಮೇಲಿದೆ ಎಂದು ಎಚ್ಚರಿಸಿದರು.
ರಾಜ್ಯ ಸಮಿತಿ ಉಪಾಧ್ಯಕ್ಷರಾದ ಚಂದ್ರಕಲಾ ಮಾತನಾಡಿ, ರಾಜ್ಯ ಸರ್ಕಾರ, ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ಯೋಜನೆಯಡಿ ಗ್ರಾಮ ಪಂಚಾಯಿತಿಗೆ ಒಂದರAತೆ ರಾಜ್ಯದಲ್ಲಿ 6000ಮ್ಯಾಗ್ನೆಟ್ ಶಾಲೆ ಸ್ಥಾಪಿಸುವ ಮೂಲಕ 40,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಬಡ ಮಕ್ಕಳ ಶಿಕ್ಷಣ ಕನಸನ್ನು ಕಸಿದುಕೊಳ್ಳಲು ಮುಂದಾಗುತ್ತಿದೆ.
ರಾಜ್ಯದಲ್ಲಿ ಒಂದೇ ಒಂದು ಶಾಲೆ ಮುಚ್ಚುವುದಿಲ್ಲ ಎಂಬ ಸರ್ಕಾರದ ಸ್ಪಷ್ಟನೆ ಮತ್ತು ಮಾಧ್ಯಮಗಳೆದುರು ಶಿಕ್ಷಣ ಸಚಿವರು, ಹೇಳುತ್ತಿರುವ ಮಾತು ಸತ್ಯಕ್ಕೆ ದೂರವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಯಾವ ಶಾಲೆಯನ್ನು ಮ್ಯಾಗ್ನೆಟ್ ಶಾಲೆಯನ್ನಾಗಿ ಮಾಡಬೇಕು, ಆ ಶಾಲೆಗೆ ಯಾವ ಯಾವ ಶಾಲೆ ಸೇರಿಸಬೇಕು ಎಂಬುದರ ಪೂರ್ಣ ಪಟ್ಟಿ ಯನ್ನು ಈಗಾಗಲೇ ಸಿದ್ಧಗೊಳಿಸಲಾಗಿದೆ.
ಶಾಲೆಗಳ ಅಭಿವೃದ್ಧಿಯ ಹೆಸರಲ್ಲಿ ರಾಜ್ಯದ ಜನತೆಯನ್ನು ವಂಚಿಸಿ ಬಡ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣ ಕಸಿದುಕೊಳ್ಳುವ ಸರ್ಕಾರದ ಘೋರ ಹುನ್ನಾರ ಇದಾಗಿದೆ ಎಂದು ದೂರಿದರು.
ನಂತರ ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಮಾತನಾಡಿ, ಇಂದಿನ ಸಮ್ಮೇಳನದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಬೇಕು ಹಾಗೂ ಹಾಸನ ವಿಶ್ವವಿದ್ಯಾಲಯ ಉಳಿಸಬೇಕೆಂದು ಎರಡು ಗೊತ್ತುವಳಿ ಮಂಡಿಸಲಾಯಿತು ಎಂದರು.
ಸಮ್ಮೇಳನದಲ್ಲಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲು ಹಾಗೂ ನಾಯಕತ್ವ ನೀಡಲು ಜಿಲ್ಲೆಯ ನೂತನ ಜಿಲ್ಲಾ ಕೌನ್ಸಿಲ್ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚೈತ್ರ ಯು.ಕೆ, ಉಪಾಧ್ಯಕ್ಷರಾಗಿ ಅಭಿಷೇಕ್ ಡಿ.ಪಿ, ಕಾರ್ಯದರ್ಶಿಯಾಗಿ ಸುಷ್ಮಾ, ಜಂಟಿ ಕಾರ್ಯದರ್ಶಿಗಳಾಗಿ ಮಮತಾ, ಪುರುಷೋತ್ತಮ್, ಚಂದ್ರಶೇಖರ್, ಶ್ಯಾಮಲಾ, ಮೋಹನ್ ರಾಥೋಡ್, ಧನರಾಜ್ ಹಾಗೂ ಕಾರ್ಯಕಾರಿ ಸಮಿತಿಯಲ್ಲಿ ವಿವಿಧ ಕಾಲೇಜಿನ 31 ವಿದ್ಯಾರ್ಥಿಗಳು ಹಾಗೂ 56ವಿದ್ಯಾರ್ಥಿಗಳು ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾದರು. ನೂರಾರು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
The first AIDSO Student District Conference held in the city today demanded the immediate abandonment of the KPS Magnet project, which is killing government schools.









