ಚನ್ನರಾಯಪಟ್ಟಣ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಕುಂದೂರು ಮಠದಲ್ಲಿ ಸುಬ್ರಹ್ಮಣ್ಯೇಶ್ವರಸ್ವಾಮಿ ಹಾಗೂ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಧರ್ಮಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕ್ಷೇತ್ರಕ್ಕೆ ಆಗಮಿಸಿದ ಸ್ವಾಮೀಜಿ ಅವರನ್ನು ಮಂಗಳವಾದ್ಯದನಾದದೊಂದಿಗೆ ಬರಮಾಡಿಕೊಳ್ಳಲಾಯಿತು. ಸುಬ್ರಹ್ಮಣ್ಯೇಶ್ವರ ದೇಗುಲದ ಬಳಿ ಗೋವು ಪೂಜೆ ನೆರವೇರಿಸಿ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ರಂಗನಾಥಸ್ವಾಮಿ, ವಿಶ್ವನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿ ದೇಗುಲದ ಮುಂಭಾಗ ಧರ್ಮ ಧ್ವಜಾರೋಹಣ ನೆರವೇರಿಸಿ ರಥಕ್ಕೆ ನವಕಲಶಾರೋಹಣ ಮಾಡಿದರು.
ಕ್ಷೇತ್ರದ ಪ್ರಧಾನ ದೇವತೆ ಮೆಳೆಯಮ್ಮ, ರಂಗನಾಥಸ್ವಾಮಿ, ಸತ್ಯನಾರಾಯಣಸ್ವಾಮಿ, ಲಕ್ಷ್ಮೀದೇವಿ ವಿಶ್ವನಾಥ, ಪಾರ್ವತಿ ಅಮ್ಮನವರು, ಸುಬ್ರಹ್ಮಣ್ಯೇಶ್ವರ ಸ್ವಾಮಿ ಹಾಗೂ ಪರಿವಾರ ದೇವರುಗಳು, ಕ್ಷೇತ್ರದ ಹಿಂದಿನ ಪೀಠಾಧ್ಯಕ್ಷರ ಸ್ಮರಣೆಯೊಂದಿಗೆ ಜಾತ್ರಾ ಮಹೋತ್ಸವ ಆರಂಭವಾಯಿತು.
ಕ್ಷೇತ್ರ ದೇವತೆ ಆದಿಶಕ್ತಿ ಮೆಳೆಯಮ್ಮ ದೇವಿಗೆ ಶ್ರೀಗಳು ಪೂಜೆ ಸಲ್ಲಿಸಿ ದೇವಿಯ ಸನ್ನಿಧಾನದಲ್ಲಿ ಶ್ರೀ ಗಣಪತಿ ಹೋಮ, ವಾಸ್ತು ಹೋಮ, ಮೃತ್ಯುಂಜಯ ಹೋಮ, ದುರ್ಗಾ ಹೋಮ, ಪೂರ್ಣಾಹುತಿ ಮಹಾಮಂಗಳಾರತಿ ನೆರವೇರಿಸಿದರು.
ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಸುಮಂಗಲಿಯರು ಲಲಿತ ಸಹಸ್ರನಾಮ, ಲಲಿತ ತ್ರಿಶತಿ, ಪಠಿಸಿ ಸಾಮೂಹಿಕ ಕುಂಕುಮಾರ್ಚನೆ ನೆರವೇರಿಸಿದರು.
ಶ್ರೀ ಆದಿಚುಂಚನಗಿರಿ ಹಾಸನ ಮತ್ತು ಕೊಡಗು ಮಠದ ಕಾರ್ಯದರ್ಶಿ ಶ್ರೀ ಶಂಭುನಾಥಸ್ವಾಮೀಜಿ, ಮೈಸೂರು ಶಾಖ ಮಠದ ಮಠಾಧೀಶ ಸೋಮೇಶ್ವರನಾಥ ಸ್ವಾಮೀಜಿ, ಬೆಂಗಳೂರಿನ ಹುಳಿಮಾವು ಕ್ಷೇತ್ರದ ಶಾಖಾ ಮಠದ ಮಠಾಧೀಶ ಶ್ರೀ ಶೈಲನಾಥ ಸ್ವಾಮೀಜಿ ಸೇರಿ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ನ.26 ರಂದು ಶ್ರೀ ಕ್ಷೇತ್ರದಲ್ಲಿ ಸಂಜೆ 4:30 ಗಂಟೆಗೆ ಸುಬ್ರಹ್ಮಣ್ಯೇಶ್ವರಸ್ವಾಮಿ ರಥೋತ್ಸವ ಹಾಗೂ ಸರ್ಪವಾಹನೋತ್ಸವ ಜರುಗಲಿದೆ.
ಉಪವಾಸ ವ್ರತ ಆಚರಿಸುವ ಸುತ್ತಲಿನ ಗ್ರಾಮಸ್ಥರು ಕ್ಷೇತ್ರಕ್ಕೆ ಆಗಮಿಸಿ ಪೂಜೆ ಸಲ್ಲಿಸುವರು. ಅದೇ ದಿನ ಸಂಜೆ 6.30ಕ್ಕೆ ಆಯೋಜಿಸಿರುವ ಧಾರ್ಮಿಕ ಸಮಾರಂಭದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯವಹಿಸುವರು.
ನ.27 ರಂದು ರಂಗನಾಥಸ್ವಾಮಿಯ ರಥೋತ್ಸವ ಮತ್ತು ಗರುಡೋತ್ಸವ ಜರುಗಲಿದೆ. ಮೂರು ದಿನ ನಿತ್ಯಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ.
ನ.28 ರಂದು ಕ್ಷೇತ್ರದ ಹಿಂದಿನ ಪೀಠಾಧ್ಯಕ್ಷರು ಪುಣ್ಯಾರಾಧನೆ ಹಾಗೂ ಗುರು ಸಂಸ್ಮರಣೋತ್ಸವ ಏರ್ಪಡಿಸಲಾಗಿದೆ.










