ಹಾಸನ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವ ಆರೋಪಿಯನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಆಗ್ರಹಿಸಿ ದಲಿತ ಸಂಘಟನೆ ಸಮನ್ವಯ ಸಮಿತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರಿನ ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ಆರೋಪಿ ವಕೀಲ ಕಿಶೋರ ರಾಕೇಶ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.ಈ ವೇಳೆ ಮಾತನಾಡಿದ ಆರ್‌ಪಿಐ ರಾಜ್ಯಾಧ್ಯಕ್ಷ ಸತೀಶ್, ಬಿ.ಆರ್. ಗವಾಯಿ ಅವರು ಧರ್ಮ ಮಾರ್ಗದಲ್ಲಿ ನಡೆಯುತ್ತಿರುವ ಡಾ.ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದು, ಇದನ್ನು ಮನುವಾದಿ ಮನಸ್ಥಿತಿಯ ಜಾತಿವಾದಿಗಳಿಗೆ ಅರಗಿಸಿಕೊಳ್ಳಲು ಆಗದೆ ಅವರ ಮೇಲೆ ಶೂ ಎಸೆದಿದ್ದಾರೆ ಎಂದು ಕಿಡಿಕಾರಿದರು.
ವಕೀಲ ಕಿಶೋರ್ ರಾಕೇಶ್ ಶೂ ಎಸೆದಿರುವುದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಮಾತ್ರವಲ್ಲ, ಈ ಮೂಲಕ ಪರಮೋಚ್ಛ ದೇಶದ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ದೇವರೇ ನನಗೆ ಪ್ರೇರಣೆ ನೀಡಿತು ಎಂದು ಆರೋಪಿ ಹೇಳಿದ್ದಾನೆ. ಅಂತಹ ದೇವರಿಗೂ ನಮ್ಮ ಧಿಕ್ಕಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಆರೋಪಿ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿ ಬಂಧಿಸಬೇಕು. ಇಲ್ಲದಿದ್ದರೆ ದಲಿತಪರ ಸಂಘಟನೆಗಳ ವತಿಯಿಂದ ದೇಶಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.ಈ ವೇಳೆ ಹಿರಿಯ ದಲಿತ ಮುಖಂಡರಾದ ಕೃಷ್ಣದಾಸ್, ಅಂಬುಗ ಮಲ್ಲೇಶ್, ಸೋಮಶೇಖರ್, ವೀರೇಶ್, ಮಲ್ಲಿಗೆವಾಳು ದ್ಯಾವಪ್ಪ, ಶಿವಮ್ಮ ಮೊದಲಾದವರಿದ್ದರು.










