ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದಲ್ಲಿ ಹೆಣ್ಣು ಹುಲಿಯ ಮೃತದೇಹ ಪತ್ತೆ, ಕಾದಾಟದಲ್ಲಿ ಸಾವಿನ ಶಂಕೆ

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ವನ್ಯಜೀವಿ ಅಭಯಾರಣ್ಯದ ಲಕ್ಕವಳ್ಳಿ ವಲಯದ ಕೂಟ್ ರಸ್ತೆಯಲ್ಲಿ ಏಳು ವರ್ಷದ ಹೆಣ್ಣು ಹುಲಿಯ ಮೃತದೇಹ ಪತ್ತೆಯಾಗಿದೆ. ಗಸ್ತು ತಿರುಗುತ್ತಿದ್ದ ಅರಣ್ಯ ಸಿಬ್ಬಂದಿಗೆ ಈ ಕಳೇಬರ ಕಾಣಿಸಿದ್ದು, ಇದು ಮತ್ತೊಂದು ಹುಲಿಯೊಂದಿಗಿನ ಕಾದಾಟದಲ್ಲಿ ಸಂಭವಿಸಿರುವ ಸಾವು ಎಂದು ಶಂಕಿಸಲಾಗಿದೆ.

ಮೃತ ಹುಲಿಯ ದೇಹದ ಮೇಲೆ ಕಾದಾಟದ ಗಾಯದ ಗುರುತುಗಳು ಕಂಡುಬಂದಿದ್ದು, ಹಿರಿಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎನ್.ಆರ್.ಪುರದ ಯೋಗೇಶ್ ಎಂಬ ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದು, ರಕ್ತದ ಮಾದರಿಗಳು ಮತ್ತು ದೇಹದ ಕೆಲವು ಭಾಗಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಗನ್‌ಶಾಟ್ ಗಾಯಗಳಿವೆಯೇ ಎಂದು ಖಚಿತಪಡಿಸಿಕೊಳ್ಳಲು ಮೆಟಲ್ ಡಿಟೆಕ್ಟರ್‌ನಿಂದ ದೇಹವನ್ನು ಪರಿಶೀಲಿಸಲಾಗಿದೆ. ಕಾನೂನಾತ್ಮಕ ಮಾರ್ಗಸೂಚಿಗಳಂತೆ ಮೃತದೇಹವನ್ನು ಸುಡಲಾಗಿದೆ.