ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿರುವ ಮಧ್ಯಂತರ ವರದಿಯನ್ನು ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯ ತಟಸ್ಥಗೊಳಿಸಿದೆ. ಎಸ್‌ಐಟಿ ಕೋರಿದ್ದಂತೆ ಮಹೇಶ್ ಶೆಟ್ಟಿ ಸೇರಿದಂತೆ ಆರು ಮಂದಿಯ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡಲು ನ್ಯಾಯಾಲಯ ನಿರಾಕರಿಸಿದೆ.
ನ್ಯಾಯಾಲಯದ ಮುಂದೆ ಎಸ್‌ಐಟಿ ಮಧ್ಯಂತರ/ಪ್ರಾಥಮಿಕ ವರದಿ ಸಲ್ಲಿಸಿದ್ದರೂ, ಅದು ಅಪೂರ್ಣವಾಗಿದೆ ಎಂಬ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಅಪೂರ್ಣ ವರದಿಯ ಆಧಾರದಲ್ಲಿ ಯಾರ ಮೇಲೆಯೂ ಕ್ರಮ ಕೈಗೊಳ್ಳಲು ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್ ಸ್ಪಷ್ಟಪಡಿಸಿದರು. ಆದಕಾರಣ, ಅಪೂರ್ಣ ವರದಿಯನ್ನು ತಟಸ್ಥಗೊಳಿಸಿ ಪೂರ್ಣ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚನೆ ನೀಡಲಾಗಿದೆ.
ಪೂರ್ಣ ವರದಿ ಸಲ್ಲಿಸಿದ ಬಳಿಕವೇ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ನ್ಯಾಯಾಲಯ ತಿಳಿಸಿದ್ದು, ವಿಚಾರಣೆಯನ್ನು ಜ.23ಕ್ಕೆ ಮುಂದೂಡಿದೆ.
ಮಹೇಶ್ ಶೆಟ್ಟಿ ಸೇರಿದಂತೆ ಸೌಜನ್ಯ ಪರ ಹೋರಾಟಗಾರರ ಪರವಾಗಿ ಬೆಂಗಳೂರಿನ ಹಿರಿಯ ನ್ಯಾಯವಾದಿ ದೊರೆ ರಾಜು, ವಿಜಯ ವಾಸು ಪೂಜಾರಿ ಹಾಗೂ ಸಿರಾಜುದ್ದೀನ್ ಜೋಗಿಬೆಟ್ಟು ಅವರ ತಂಡ ವಾದ ಮಂಡಿಸಿದರು. ವಾದವಿವಾದಗಳನ್ನು ಆಲಿಸಿದ ನ್ಯಾಯಾಲಯ, ಎಸ್‌ಐಟಿ ಸಲ್ಲಿಸಿರುವ ವರದಿ ಅಪೂರ್ಣವಾಗಿದೆ ಎಂಬ ಆಕ್ಷೇಪಕ್ಕೆ ಸಮ್ಮತ ವ್ಯಕ್ತಪಡಿಸಿತು.
ಇದೇ ವೇಳೆ, ಧರ್ಮಸ್ಥಳ ಪರವಾಗಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿ ಹಿರಿಯ ನ್ಯಾಯವಾದಿ ದೊರೆ ರಾಜು ತಕರಾರು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆಯೂ ಜ.23ರಂದು ನಡೆಯಲಿದೆ. ಈ ಅರ್ಜಿಗೆ ಸಂಬಂಧಿಸಿದಂತೆ ಎಸ್‌ಐಟಿ ಪರವಾಗಿ ಸರಕಾರಿ ವಕೀಲರು ವಾದ ಮಂಡಿಸಿದರು.










