ಹಾಸನ: ನಗರದ ರವೀಂದ್ರ ನಗರದಲ್ಲಿರುವ ಕುರುಹಿನ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೋಮವಾರದಂದು ಅಡ್ವಾನ್ಸ್ ಯೋಗ ಶಿಕ್ಷಕರ ತರಬೇತಿ ಶಿಬಿರವು ವಿಧಿವಿಧಾನಗಳೊಂದಿಗೆ ಅಗ್ನಿಹೋತ್ರದ ಮೂಲಕ ಭಕ್ತಿ ಭಾವಪೂರ್ಣವಾಗಿ ಪ್ರಾರಂಭವಾಯಿತು.
ಭಾರತ್ ಸ್ವಾಭಿಮಾನ ಟ್ರಸ್ಟ್ ನ ಉತ್ತರ ಕರ್ನಾಟಕ ಸಹ ರಾಜ್ಯ ಪ್ರಭಾರಿಗಳಾದ ಬಾಲಚಂದ್ರ ಶರ್ಮ ಅವರು ಶಿಬಿರ ಉದ್ಘಾಟಿಸಿದರು.
ಡಿ.15 ರಿಂದ 2026 ಜ.13 ರವರೆಗೆ ನಡೆಯಲಿರುವ ಈ ಒಂದು ತಿಂಗಳ ಕಾಲದ ತರಬೇತಿ ಶಿಬಿರವು ಯೋಗ ಶಿಕ್ಷಕರಿಗೆ ಉನ್ನತ ಮಟ್ಟದ ತರಬೇತಿ ನೀಡುವ ಗುರಿ ಹೊಂದಿದೆ. ಯೋಗಾಸನ , ಪ್ರಾಣಾಯಾಮ, ಧ್ಯಾನ ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಮಹತ್ವದ ಕುರಿತು ವಿವರ ಮಾಹಿತಿ ನೀಡಿದರು.
ಸರಿಯಾದ ಆಹಾರ ಮತ್ತು ನಿಯಮಿತ ಯೋಗಾಭ್ಯಾಸದಿಂದ ಅನೇಕ ಜೀವನಶೈಲಿ ಸಂಬಂಧಿತ ರೋಗ ತಡೆಯಲು ಸಾಧ್ಯವೆಂದು ಅವರು ತಿಳಿಸಿದರು.
ನಂತರ ಈ ಸಂದರ್ಭದಲ್ಲಿ ಮಾತನಾಡಿದ ಅವರು, ಯೋಗವು ಕೇವಲ ವ್ಯಾಯಾಮವಲ್ಲ, ಅದು ಜೀವನ ಶೈಲಿ, ಆತ್ಮಶುದ್ಧಿ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದಾರಿಯಾಗಿದೆ ಎಂದು ಹೇಳಿದರು.
ಯೋಗ ಶಿಕ್ಷಕರು ಸಮಾಜದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಮಹತ್ವದ ಹೊಣೆಗಾರಿಕೆ ಹೊಂದಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಕೆ.ಸಿ. ನಾರಾಯಣಶೆಟ್ಟಿ ಅವರು ಹಾಗೂ ನೇಕಾರ ಕುರುಹಿನ ಶೆಟ್ಟಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ. ಕೃಷ್ಣಶೆಟ್ಟಿ ಅವರು ಆಗಮಿಸಿ ಶಿಬಿರಕ್ಕೆ ಶುಭ ಹಾರೈಸಿದರು. ಯೋಗದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಇಂತಹ ತರಬೇತಿ ಶಿಬಿರ ಅತ್ಯಂತ ಉಪಯುಕ್ತವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದ ಮಧ್ಯದಲ್ಲಿ ಪತಂಜಲಿ ಯೋಗ ಸಮಿತಿ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಅವರು ಅಂತರ್ಜಾಲದ ಮೂಲಕ ಮಾತನಾಡಿ, ಹಾಸನ ಜಿಲ್ಲೆಯ ಪ್ರತಿಯೊಂದು ಮನೆಗೂ ಯೋಗವನ್ನು ತಲುಪಿಸುವ ಸಂಕಲ್ಪವನ್ನು ಪ್ರತಿಯೊಬ್ಬರೂ ಹೊಂದಬೇಕು. ಹಾಸನವನ್ನು ಯೋಗಮಯ ಜಿಲ್ಲೆಯಾಗಿ ರೂಪಿಸುವಲ್ಲಿ ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ವೇದಭಾರತಿ ಸಂಯೋಜಕರು ಹಾಗೂ ನಿಕಟ ಪೂರ್ವ ಪತಂಜಲಿ ಜಿಲ್ಲಾ ಸಂರಕ್ಷಕ ಹರಿಹರಪುರ ಶ್ರೀಧರ್ ಭಾಗವಹಿಸಿ, ಹಾಸನದ ಜನತೆ ಈ ಶಿಬಿರದ ಸದುಪಯೋಗ ಪಡೆದುಕೊಂಡು ಆರೋಗ್ಯಕರ ಜೀವನ ನಡೆಸಬೇಕೆಂದು ಮನವಿ ಮಾಡಿದರು. ಶಿಬಿರದ ಮೊದಲ ದಿನದ ತರಗತಿಯನ್ನು ಬಾಲಚಂದ್ರ ಅವರು ನಡೆಸಿಕೊಟ್ಟು, ಯೋಗಾಸನ, ಪ್ರಾಣಾಯಾಮ, ಧ್ಯಾನ ಮತ್ತು ಆರೋಗ್ಯಕರ ಆಹಾರ ಪದ್ಧತಿಯ ಮಹತ್ವದ ಕುರಿತು ವಿವರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪತಂಜಲಿ ಜಿಲ್ಲಾ ಸಂರಕ್ಷಕರಾದ ಲೋಕನಾಥ್, ಪತಂಜಲಿ ರಾಜ್ಯ ಸಹಯೋಗ ಪ್ರಭಾರಿಗಳಾದ ಸುರೇಶ್, ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಶೇಷಪ್ಪ, ಪ್ರಭಾರಿಗಳಾದ ದೊರೆಸ್ವಾಮಿ, ಕೇಶವಮೂರ್ತಿ, ಶಿವನಂಜೇಗೌಡರು, ಸಚಿನ್, ಜಿಲ್ಲಾ ಮಹಿಳಾ ಪ್ರಭಾರಿಗಳಾದ ಶಾರದಾ ಧರ್ಮಾನಂದ, ಸಹಪ್ರಭಾರಿಗಳಾದ ನಟರಾಜ್, ಪವಿತ್ರ, ಮಂಜುಳಾ ಸೇರಿದಂತೆ ಯೋಗಾಸಕ್ತರು ಹಾಗೂ ಕಾರ್ಯಕರ್ತರು ಇದ್ದರು.
The Advanced Yoga Teacher Training Camp began with devotional rituals and Agnihotra at the Kuruhina Shetty Kalyana Mantapa in Ravindra Nagar on Monday.









