23 C
Munich
Home News ತೆಲಂಗಾಣ-ಕರ್ನಾಟಕದ 16 ಕಡೆ ಎಸಿಬಿ ದಾಳಿ | 46 ಎಕರೆ ಕೃಷಿ ಭೂಮಿ, ಐಷಾರಾಮಿ ವಿಲ್ಲಾಗಳು,...

ತೆಲಂಗಾಣ-ಕರ್ನಾಟಕದ 16 ಕಡೆ ಎಸಿಬಿ ದಾಳಿ | 46 ಎಕರೆ ಕೃಷಿ ಭೂಮಿ, ಐಷಾರಾಮಿ ವಿಲ್ಲಾಗಳು, ಚಿನ್ನ, ನಗದು ಹಾಗೂ ಬೇನಾಮಿ ಡೈರಿ ವಶ

ಹೈದರಾಬಾದ್, ಜು.6 (www.kannadapost.com):ತೆಲಂಗಾಣ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಭ್ರಷ್ಟಾಚಾರದ ಜಾಲವನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ಬಯಲಿಗೆಳೆದಿದೆ. ಪೊಲೀಸ್ ಕಂಪ್ಯೂಟರ್ ಸರ್ವೀಸ್ (PCS) ವಿಭಾಗದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿಎಸ್‌ಪಿ) ಕಾರ್ಯನಿರ್ವಹಿಸುತ್ತಿದ್ದ ಸಂಕಿರೆಡ್ಡಿ ಭೀಮ್ ರೆಡ್ಡಿ ಅವರು ತಮ್ಮ ಅಧಿಕೃತ ಆದಾಯಕ್ಕಿಂತ ಹಲವು ಪಟ್ಟು ಅಧಿಕ ಮೌಲ್ಯದ ಅಕ್ರಮ ಆಸ್ತಿ ಗಳಿಸಿರುವ ಆರೋಪದ ಮೇಲೆ ಎಸಿಬಿ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾರೆ.

ಗುರುವಾರ ಬೆಳಗಿನ ಜಾವದಿಂದಲೇ ಎಸಿಬಿ ಅಧಿಕಾರಿಗಳು ತೆಲಂಗಾಣ ಹಾಗೂ ಕರ್ನಾಟಕ ಸೇರಿ ಒಟ್ಟು 16 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದರು. ಈ ವೇಳೆ ಭೀಮ್ ರೆಡ್ಡಿ, ಅವರ ಸಂಬಂಧಿಕರು, ಸ್ನೇಹಿತರು ಹಾಗೂ ಬೇನಾಮಿದಾರರಿಗೆ ಸೇರಿದ ಆಸ್ತಿ-ಪಾಸ್ತಿಗಳ ದಾಖಲೆಗಳು, ನಗದು, ಚಿನ್ನಾಭರಣ ಹಾಗೂ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಾಥಮಿಕ ಅಂದಾಜಿನ ಪ್ರಕಾರ, 200 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿರುವುದು ತನಿಖಾ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ.

ನಗದು, ಚಿನ್ನ ಹಾಗೂ ಬೆಳ್ಳಿ ಜಪ್ತಿ

ದಾಳಿಯ ವೇಳೆ ಡಿಎಸ್‌ಪಿ ನಿವಾಸದಿಂದ ₹3.60 ಲಕ್ಷ ನಗದು, ಪ್ರಮುಖ ಬೇನಾಮಿದಾರನ ಮನೆಯಿಂದ ₹40 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ,

  • ಸುಮಾರು 2 ಕೆಜಿ ಚಿನ್ನಾಭರಣ
  • 20 ಕೆಜಿ ಬೆಳ್ಳಿ ವಸ್ತುಗಳು
  • ಬ್ಯಾಂಕ್ ಖಾತೆಗಳಲ್ಲಿದ್ದ ₹19.91 ಲಕ್ಷ ಠೇವಣಿ ಫ್ರೀಜ್
  • 23 ವಿದೇಶಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಈ ಕುರಿತು ಅಬಕಾರಿ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಕರ್ನಾಟಕದಲ್ಲೂ ಕೋಟ್ಯಂತರ ಮೌಲ್ಯದ ಆಸ್ತಿ

ಎಸಿಬಿ ತನಿಖೆಯಲ್ಲಿ ಕರ್ನಾಟಕದಲ್ಲಿಯೂ ಭೀಮ್ ರೆಡ್ಡಿ ಹೆಸರಿನ ಹಾಗೂ ಬೇನಾಮಿಗಳ ಹೆಸರಿನ ಆಸ್ತಿಗಳು ಪತ್ತೆಯಾಗಿವೆ.

ಪತ್ತೆಯಾದ ಪ್ರಮುಖ ಆಸ್ತಿಗಳಲ್ಲಿ:

  • ಕರ್ನಾಟಕದಲ್ಲಿ 46 ಎಕರೆ ಕೃಷಿ ಭೂಮಿ
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ 1 ಎಕರೆ ಬೆಲೆಬಾಳುವ ಜಮೀನು
  • ಹೈದರಾಬಾದ್‌ನ ಐಷಾರಾಮಿ ವಿಲ್ಲಾ
  • ಟೆಲಿಕಾಂ ನಗರದಲ್ಲಿರುವ ಎರಡು ಅಂತಸ್ತಿನ ಮನೆ
  • ಗಚಿಬೌಲಿ ಹಾಗೂ ಟೆಲಿಕಾಂ ನಗರದಲ್ಲಿ ಫ್ಲಾಟ್‌ಗಳು
  • ತೆಲ್ಲಾಪುರದಲ್ಲಿ ಎರಡು ಅಪಾರ್ಟ್‌ಮೆಂಟ್‌ಗಳು
  • ಐದು ಅಂತಸ್ತಿನ ವಾಣಿಜ್ಯ ಸಂಕೀರ್ಣದಲ್ಲಿ ಪಾಲುದಾರಿಕೆ
  • ವಿವಿಧ ವಾಣಿಜ್ಯ ನಿವೇಶನಗಳು ಹಾಗೂ ಕೃಷಿ ಭೂಮಿಗಳು ಸೇರಿವೆ.

ಬೇನಾಮಿ ಡೈರಿ ಪತ್ತೆ

ದಾಳಿಯ ವೇಳೆ ಅಧಿಕಾರಿಗಳಿಗೆ ಸುಮಾರು 15 ಬೇನಾಮಿದಾರರ ಹೆಸರು ಹಾಗೂ ಆಸ್ತಿ ವಿವರಗಳಿರುವ ರಹಸ್ಯ ಡೈರಿ ಸಿಕ್ಕಿದ್ದು, ತನಿಖೆಗೆ ಮಹತ್ವದ ಸುಳಿವಾಗಿದೆ.

ಈ ಹಿಂದೆ ಜೆಡ್ಚೆರ್ಲಾ ಸಿಐ ಹಾಗೂ ಪತಂಚೇರು ಡಿಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದ ಭೀಮ್ ರೆಡ್ಡಿ, ಕಪ್ಪು ಹಣವನ್ನು ಬೇನಾಮಿಗಳ ಮೂಲಕ ಹೂಡಿಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಪ್ರಕರಣ ದಾಖಲು

ಭ್ರಷ್ಟಾಚಾರ ತಡೆ ಕಾಯ್ದೆ-1988ರ ಸೆಕ್ಷನ್ 13(1)(b) ಹಾಗೂ 13(2) ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಎಸಿಬಿ ಅಧಿಕಾರಿಗಳು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇನ್ನೂ ಹಲವು ಬ್ಯಾಂಕ್ ಲಾಕರ್‌ಗಳು ಹಾಗೂ ಗುಪ್ತ ಆಸ್ತಿಗಳ ಪರಿಶೀಲನೆ ಬಾಕಿ ಇರುವುದರಿಂದ ಅಕ್ರಮ ಆಸ್ತಿಯ ಒಟ್ಟು ಮೌಲ್ಯ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ತನಿಖಾ ಮೂಲಗಳು ತಿಳಿಸಿವೆ.

error: Content is protected !!