ರಾಜ್‌ ಕೋಟ್: ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್; ಬೌಲರ್‌ಗಳನ್ನು ಚೆಂಡಾಡಿ ಮೊದಲ ಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ!

ರಾಜ್‌ ಕೋಟ್: ವಿಜಯ್ ಹಜಾರೆ ಟ್ರೋಫಿಯಲ್ಲಿ ಟೀಂ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅಬ್ಬರದ ಆಟವಾಡಿ ಕ್ರಿಕೆಟ್ ಪ್ರೇಮಿಗಳನ್ನು ಹುಚ್ಚೆಬ್ಬಿಸಿದ್ದಾರೆ. ರಾಜ್‌ಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆದ ವಿದರ್ಭ ವಿರುದ್ಧದ ಪಂದ್ಯದಲ್ಲಿ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಶತಕ ಸಿಡಿಸುವ ಮೂಲಕ ಪಾಂಡ್ಯ ಮಿಂಚಿದರು.

ಬರೋಡ ತಂಡ 71 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ, ಆರಂಭದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. 44 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪಾಂಡ್ಯ, ನಂತರ ಗೇರ್ ಬದಲಿಸಿ ಭರ್ಜರಿ ಬ್ಯಾಟ್ ಬೀಸಿದರು.

ಕೇವಲ 68 ಎಸೆತಗಳಲ್ಲಿ ಶತಕ ತಲುಪಿದ ಪಾಂಡ್ಯ, ಬೌಲರ್‌ಗಳ ಮೇಲೆ ದಾಳಿ ನಡೆಸಿ ಮೈದಾನದಲ್ಲಿ ಸಿಕ್ಸರ್ ಮಳೆ ಸುರಿಸಿದರು. ಇನ್ನಿಂಗ್ಸ್‌ನ 39ನೇ ಓವರ್‌ನಲ್ಲಿ ಎಡಗೈ ಸ್ಪಿನ್ನರ್ ಪಾರ್ಥ್ ರೇಖೆಡೆ ಬೌಲಿಂಗ್ ವೇಳೆ ಒಂದೇ ಓವರ್‌ನಲ್ಲಿ ಸತತ 5 ಸಿಕ್ಸರ್ ಹಾಗೂ ಒಂದು ಬೌಂಡರಿ ಬಾರಿಸಿ ಒಟ್ಟು 34 ರನ್ ಕಲೆ ಹಾಕಿದರು. ಇದು ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲೇ ಮೂರನೇ ದುಬಾರಿ ಓವರ್ ಎಂಬ ದಾಖಲೆಗೂ ಕಾರಣವಾಯಿತು.

ಅಂತಿಮವಾಗಿ ಹಾರ್ದಿಕ್ ಪಾಂಡ್ಯ 92 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 8 ಬೌಂಡರಿಗಳ ನೆರವಿನಿಂದ 133 ರನ್‌ಗಳ ಅಬ್ಬರದ ಇನ್ನಿಂಗ್ಸ್‌ ಆಡಿದರು. ಪಾಂಡ್ಯ ಅವರ ಈ ಸ್ಪೋಟಕ ಬ್ಯಾಟಿಂಗ್‌ ಬರೋಡ ತಂಡಕ್ಕೆ ಬಲ ತುಂಬಿದ್ದು, ಅಭಿಮಾನಿಗಳ ಮನ ಗೆದ್ದಿದೆ.