1.4 C
Munich
Home News ಹಾಸನ: ಬೇರೆಡೆಗೆ ವರ್ಗ- ಶಿಕ್ಷಕರ ಪ್ರತಿಭಟನೆ

ಹಾಸನ: ಬೇರೆಡೆಗೆ ವರ್ಗ- ಶಿಕ್ಷಕರ ಪ್ರತಿಭಟನೆ

ಹಾಸನ: ತಾಲ್ಲೂಕಿನ ಹೆಚ್ಚುವರಿ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಶಿಕ್ಷಕರು ನಗರದ ಬಿಇಒ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಇಲಾಖೆ ವಿರುದ್ಧ ಶಿಕ್ಷಕರು ಘೋಷಣೆ ಕೂಗುತ್ತಾ ತಮ್ಮ ಅಸಮಾಧಾನ, ಆಕ್ರೋಶ ಹೊರ ಹಾಕಿದರು.

ಕೌನ್ಸೆಲಿಂಗ್ ಪ್ರಕ್ರಿಯೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಇಲಾಖೆ ತೆಗೆದುಕೊಂಡ ನಿರ್ಧಾರವು ಶಿಕ್ಷಕರ ಜೀವನದಲ್ಲಿ ಅಶಾಂತಿ ಉಂಟುಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಿಕ್ಷಕ ಜಯರಾಂ ಮಾತನಾಡಿ, ತಾಲ್ಲೂಕಿನಲ್ಲಿ ನೂರಾರು ಹೆಚ್ಚುವರಿ ಶಿಕ್ಷಕರಿದ್ದಾರೆ. ಇನ್ನೂ ೩೦೦ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಹುದ್ದೆಗಳನ್ನು ರದ್ದು ಮಾಡಲಾಗಿದೆ. ಇದು ನಮಗೆ ಬಹಳ ಅನ್ಯಾಯ ಆಗಿದೆ. ಮಹಿಳಾ ಶಿಕ್ಷಕರಿಗೆ ಅನುಕೂಲವಾಗುವಂತೆ ಹುದ್ದೆಗಳನ್ನು ಸ್ಥಳೀಯವಾಗಿ ನೀಡಿದರೆ ಎಲ್ಲರಿಗೂ ಸಮಸ್ಯೆ ಪರಿಹಾರವಾಗುತ್ತದೆ.

ಆದರೆ ನಮ್ಮನ್ನು ಹೊರ ತಾಲ್ಲೂಕಿಗೆ ಕಳುಹಿಸಿದರೆ ಕುಟುಂಬ ಹಾಗೂ ಮಕ್ಕಳ ಶಿಕ್ಷಣದ ವಿಷಯದಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಮಸ್ಯೆಗೆ ಬಿಇಒ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಎಲ್ಲಾ ಹೆಚ್ಚುವರಿ ಶಿಕ್ಷಕರಿಗೂ ಹಾಸನ ತಾಲ್ಲೂಕಿನಲ್ಲಿಯೇ ಹುದ್ದೆ ನೀಡಬೇಕು.

ಇಲ್ಲದಿದ್ದರೆ ನಾವು ಕೌನ್ಸೆಲಿಂಗ್‌ಗೆ ಹಾಜರಾಗದೆ ಬಹಿಷ್ಕಾರ ಮಾಡುತ್ತೇವೆ. ಇದರ ಹೊಣೆ ಇಲಾಖೆಯದ್ದಾಗಿದೆ. ಮುಂದೆ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೋ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ನಾವು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಮತ್ತೋರ್ವ ಹಿರಿಯ ಶಿಕ್ಷಕ ಅಣ್ಣೇಗೌಡ ಮಾತನಾಡಿ,50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ಬೇರೆಡೆಗೆ ವರ್ಗ ಮಾಡುವ ಇಲಾಖೆ ನಿರ್ಧಾರ ತುಂಬಾ ಅನ್ಯಾಯಕರ. ನಾವು ವಯಸ್ಸಾದವರು, ಮಕ್ಕಳು, ಕುಟುಂಬ ಇದೆ. ಇಂತಹ ಸಂದರ್ಭದಲ್ಲಿ ದೂರದೂರಿಗೆ ಕಳುಹಿಸುವುದು ಅಸಮಂಜಸ. ಈ ತಾಲ್ಲೂಕಿನಲ್ಲಿಯೇ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಚೈತ್ರಾ ಮಂಜೇಗೌಡ, ಶಿಕ್ಷಕರ ಅಹವಾಲು ಆಲಿಸಿ, ನಿಮ್ಮ ಬೇಡಿಕೆ ನ್ಯಾಯಸಮ್ಮತ ವಾಗಿದೆ. ಈ ಕುರಿತು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.ಪ್ರತಿಭಟನೆಯಲ್ಲಿ ಶಿಕ್ಷಕರಾದ ಪರಮೇಶ್, ಕಲ್ಲಹಳ್ಳಿ ಹರೀಶ್ ಮೊದಲಾದವರಿದ್ದರು.

 

error: Content is protected !!