17.8 C
Munich
Home News Tamilnadu:ತಮಿಳುನಾಡು:ಬೆಂಬಲ ವಾಪಸ್ ಪಡೀತೀವಿ; ಸಿಎಂ ವಿಜಯ್ ಟಿವಿಕೆ ಸರ್ಕಾರಕ್ಕೆ ಸಿಪಿಎಂ ಖಡಕ್ ಎಚ್ಚರಿಕೆ!

Tamilnadu:ತಮಿಳುನಾಡು:ಬೆಂಬಲ ವಾಪಸ್ ಪಡೀತೀವಿ; ಸಿಎಂ ವಿಜಯ್ ಟಿವಿಕೆ ಸರ್ಕಾರಕ್ಕೆ ಸಿಪಿಎಂ ಖಡಕ್ ಎಚ್ಚರಿಕೆ!

ತಮಿಳುನಾಡು ರಾಜಕೀಯದಲ್ಲಿ ಟಿವಿಕೆ ಸರ್ಕಾರ, ಎಐಎಡಿಎಂಕೆ ಬಣ ಮತ್ತು ಸಿಪಿಎಂ ಬೆಂಬಲ ವಿವಾದ
ಎಐಎಡಿಎಂಕೆ ಬಣಕ್ಕೆ ಸಚಿವ ಸ್ಥಾನ ನೀಡುವ ವದಂತಿ ಬೆನ್ನಲ್ಲೇ ಟಿವಿಕೆ ಸರ್ಕಾರಕ್ಕೆ ಸಿಪಿಎಂ ಎಚ್ಚರಿಕೆ ನೀಡಿದೆ.

Tamilnadu ತಮಿಳುನಾಡಿನಲ್ಲಿ ಟಿವಿಕೆ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡಿರುವ ಸಿಪಿಎಂ, ಎಐಎಡಿಎಂಕೆ ಬಣವನ್ನು ಸಂಪುಟಕ್ಕೆ ಸೇರಿಸಿದರೆ ಬೆಂಬಲ ಮರುಪರಿಶೀಲನೆ ಮಾಡುವುದಾಗಿ ಎಚ್ಚರಿಸಿದೆ.

ತಮಿಳುನಾಡು ರಾಜಕೀಯ

ತಮಿಳುನಾಡು,ಮೇ,20,2026(www.kannadapost.com): ತಮಿಳುನಾಡು ವಿಧಾನಸಭೆಯ ವಿಶ್ವಾಸಮತ ಯಾಚನೆ ವೇಳೆ, ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದಲ್ಲಿ ಎಐಎಡಿಎಂಕೆಯ 25 ಶಾಸಕರು ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಇದರಿಂದಾಗಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಸಿ.ವಿ. ಷಣ್ಮುಗಂ ನಡುವೆ ಪಕ್ಷದಲ್ಲಿ ಆಂತರಿಕ ಸಂಘರ್ಷ ಶುರುವಾಗಿದೆ. ಇನ್ನೊಂದೆಡೆ, ಟಿವಿಕೆಯನ್ನು ಬೆಂಬಲಿಸಿದ ಎಐಎಡಿಎಂಕೆ ಬಣಕ್ಕೆ ಮಂತ್ರಿ ಸ್ಥಾನ ನೀಡಲಾಗುತ್ತಿದೆ ಎಂಬ ವದಂತಿ ಹಬ್ಬಿದೆ.

ಎಐಎಡಿಎಂಕೆ ಶಾಸಕರ ಒಂದು ಬಣ

ಒಂದು ವೇಳೆ ಟಿವಿಕೆ ಪಕ್ಷವು ಎಐಎಡಿಎಂಕೆಯ ಒಂದು ಬಣವನ್ನು ಸೇರಿಸಿಕೊಂಡು ಸರ್ಕಾರ ರಚಿಸುವ ನಿರ್ಧಾರಕ್ಕೆ ಬಂದರೆ, ನಾವು ಖಂಡಿತವಾಗಿಯೂ ನಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡುತ್ತೇವೆ ಎಂದು ಸಿಪಿಎಂ ಸ್ಪಷ್ಟಪಡಿಸಿದೆ.

ಬೆಂಬಲ ನೀಡಿರುವ ಬಗ್ಗೆ ಮರುಚಿಂತನೆ

ತಿರುತ್ತರೈಪುಂಡಿಯಲ್ಲಿ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಸುದ್ದಿಗಾರರೊಂದಿಗೆ ಈ ಬಗ್ಗೆ ಮಾತನಾಡಿದರು. ‘ತಮಿಳುನಾಡಿನಲ್ಲಿ ಜನರಿಂದ ಆಯ್ಕೆಯಾದ ಸರ್ಕಾರ ರಚನೆಯಾಗಬೇಕು ಎಂಬ ಉದ್ದೇಶದಿಂದ ಎಡಪಕ್ಷಗಳು ಮತ್ತು ವಿಸಿಕೆ ಪಕ್ಷಗಳು ಟಿವಿಕೆಗೆ ಹೊರಗಿನಿಂದ ಬೆಂಬಲ ನೀಡಿವೆ. ಅದರಂತೆ ಟಿವಿಕೆ ಸರ್ಕಾರ ರಚನೆಯಾಗಿದೆ. ಇಂತಹ ಸಂದರ್ಭದಲ್ಲಿ ಎಐಎಡಿಎಂಕೆ ನಾಯಕರನ್ನು ಸಂಪುಟಕ್ಕೆ ಸೇರಿಸಿಕೊಂಡರೆ, ಅದು ಜನರ ತೀರ್ಪಿಗೆ ವಿರುದ್ಧವಾಗುತ್ತದೆ. ಹಾಗೇನಾದರೂ ನಡೆದರೆ, ಟಿವಿಕೆ ಸರ್ಕಾರಕ್ಕೆ ನೀಡಿದ ಬೆಂಬಲದ ಬಗ್ಗೆ ಮರುಚಿಂತನೆ ನಡೆಸುತ್ತೇವೆ’ ಎಂದು ಅವರು ತಿಳಿಸಿದ್ದಾರೆ.

ವಿಜಯ್ ಆ ಹಂತಕ್ಕೆ ಹೋಗಲ್ಲ ಎಂಬುವುದು ನಮ್ಮ ನಂಬಿಕೆ!

‘ಜನರು ಎಐಎಡಿಎಂಕೆ ಮತ್ತು ಡಿಎಂಕೆ ವಿರುದ್ಧ ಮತ ಹಾಕಿದ್ದಾರೆ. ಹೀಗಿರುವಾಗ ಎಐಎಡಿಎಂಕೆಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಜನರ ತೀರ್ಪಿಗೆ ವಿರುದ್ಧ. ಉತ್ತಮ ಆಡಳಿತ ನೀಡುತ್ತೇನೆ ಎಂಬ ಮಾತಿಗೆ ಇದು ವಿರುದ್ಧವಾಗಿ ಬಿಡುತ್ತದೆ. ಮತ್ತೊಂದು ಚುನಾವಣೆಯನ್ನು ಎದುರಿಸಬಾರದು ಮತ್ತು ಹಿಂಬಾಗಿಲಿನಿಂದ ಬಿಜೆಪಿ ರಾಜ್ಯಪಾಲರ ಆಡಳಿತವನ್ನು ತರಬಾರದು ಎಂಬ ಕಾರಣಕ್ಕಾಗಿಯೇ ನಾವು ಟಿವಿಕೆಗೆ ಬೆಂಬಲ ನೀಡಿದ್ದೇವೆ. ಅವರು ಅಂತಹ ಹಂತಕ್ಕೆ ಹೋಗುವುದಿಲ್ಲ ಎಂದು ನಾನು ನಂಬುತ್ತೇನೆ’ ಎಂದು ಅವರು ಹೇಳಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ಟಿವಿಕೆ ಸರ್ಕಾರ, ಎಐಎಡಿಎಂಕೆ ಬಣ ಮತ್ತು ಸಿಪಿಎಂ ಬೆಂಬಲ ವಿವಾದ

error: Content is protected !!