ಸುರತ್ಕಲ್, ಆಗಸ್ಟ್ 09, 2025: ಕರಾವಳಿ ಭಾಗದ ವೀರಶೈವ- ಲಿಂಗಾಯತ ಸಮಾಜದ ಪ್ರಮುಖ ಮುಖಂಡ, ಖ್ಯಾತ ಉದ್ಯಮಿ ಜೆ.ಡಿ.ವೀರಪ್ಪ (71) ಅವರು ಇಂದು ನಿಧನರಾಗಿದ್ದಾರೆ.
ಸಕಲೇಶಪುರದ ಇಬ್ಬಡಿ ಶಾಂತಪುರದ ಮೂಲ ನಿವಾಸಿಯಾದ ವೀರಪ್ಪ ಅವರು, ಸುರತ್ಕಲ್‌ನಲ್ಲಿ ನೆಲೆಸಿದ್ದರು. ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ ಸುರತ್ಕಲ್‌ನಲ್ಲಿ ನಡೆಯಲಿದೆ.
ಕಾಸಿಲ್ಲದೆ ಉದ್ಯಮ ಆರಂಭಿಸಿ, ಬುದ್ಧಿವಂತಿಕೆ ಮತ್ತು ಕ್ರಿಯಾಶೀಲತೆಯಿಂದ ಕರಾವಳಿ ಭಾಗದಲ್ಲಿ ದೊಡ್ಡ ಹೆಸರು ಗಳಿಸಿದ ವೀರಪ್ಪ, ಮಂಗಳೂರು ರಿಫೈನರಿ ಕಂಪನಿ (ONGC) ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ಬಣ್ಣ ನಿರ್ವಹಣೆ ಉದ್ಯಮದಲ್ಲಿ ಗುರುತಿಸಿಕೊಂಡಿದ್ದರು. ಕ್ರಿಕೆಟ್ ತಾರೆ ರಾಹುಲ್ ಅವರ ತಂದೆ ಲೋಕೇಶ್, ಎಂಆರ್‌ಪಿಎಲ್‌ನ ಸುದರ್ಶನ್‌ರವರ ಜತೆ ಸೇರಿ ಕರಾವಳಿಯಲ್ಲಿ ಲಿಂಗಾಯತ ಸಮಾಜವನ್ನು ಸಂಘಟಿಸಿದ್ದರು.
ಅಲ್ಲಿ ಬಸವೇಶ್ವರ ಪ್ರತಿಮೆ ಸ್ಥಾಪಿಸಿ, ಬಸವ ಜಯಂತಿ ಆಚರಣೆಯನ್ನು ಆಯೋಜಿಸುವ ಮೂಲಕ ಸಮಾಜದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಮಹತ್ವದ ಕೊಡುಗೆ ನೀಡಿದ್ದ ವೀರಪ್ಪ, ನಾಡಿನ ಎಲ್ಲಾ ಸ್ವಾಮೀಜಿಗಳನ್ನು ಗೌರವಿಸಿ ಸನ್ಮಾನಿಸಿದ್ದರು.
“ನನ್ನ ಜೀವನದಲ್ಲಿ ಇಂತಹ ನಿಸ್ವಾರ್ಥ ಸೇವೆ ಸಲ್ಲಿಸಿದ ವ್ಯಕ್ತಿಗಳನ್ನು ನೋಡಿರುವುದು ವಿರಳ,” ಎಂದು ಅವರ ಆತ್ಮೀಯರಾದ ಹಿರಿಯ ಕಾಫಿ ಬೆಳೆಗಾರ, ಮುಖಂಡ ಬಿ.ಎ.ಜಗನ್ನಾಥ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ
ವೀರಪ್ಪ ಅವರು ಪತ್ನಿ ದಾಕ್ಷಾಯಿಣಮ್ಮ, ಮಗ ಪವನ್, ಮಗಳು ಮತ್ತು ಉನ್ನತ ಅಧಿಕಾರಿಯಾದ ಅಳಿಯ ರುದ್ರೇಶ್ ಅವರನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರಿ, ಕುಟುಂಬ ಮತ್ತು ಆತ್ಮೀಯ ಬಳಗಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ವೀರಶೈವ-ಲಿಂಗಾಯತ ಸಮಾಜದ ಬಾಂಧವರು ಪ್ರಾರ್ಥಿಸಿದ್ದಾರೆ.










