ರಾಜ್ಯ ಬಜೆಟ್: ಸರ್ಕಾರದಿಂದಲೇ ಓಟಿಟಿ, ಮಲ್ಟಿಪ್ಲೆಕ್ಸ್ ಸ್ಥಾಪನೆ, ಪತ್ರಕರ್ತರ ಮಾಸಾಶನ ₹15 ಸಾವಿರಕ್ಕೆ ಏರಿಕೆ, ಆರೋಗ್ಯ ರಕ್ಷಣೆಗೆ ಮಾಧ್ಯಮ ಸಂಜೀವಿನಿ

ಹಾಸನ: ರಾಜ್ಯ ಬಜೆಟ್ ನಲ್ಲಿ ಸಿದ್ದರಾಮಯ್ಯ ಸಿನಿಮಾ ಹಾಗೂ ಪತ್ರಿಕಾ ರಂಗಗಳಿಗೆ  ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಸಿನಿಮಾ ಕ್ಷೇತ್ರವನ್ನು ಉದ್ಯಮವೆಂದು ಪರಿಗಣಿಸಿ, ಕೈಗಾರಿಕಾ ನೀತಿಯಡಿ ಒದಗಿಸಲಾಗುವ ಸೌಲಭ್ಯಗಳನ್ನು ನಮ್ಮ ಸರ್ಕಾರವು ಸಿನಿಮಾ ಕ್ಷೇತ್ರಕ್ಕೆ ಒದಗಿಸಲಿದೆ.

ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಚಲನಚಿತ್ರ ಅಕಾಡೆಮಿಯು ಹೊಂದಿರುವ 2.5 ಎಕರೆ ನಿವೇಶನದಲ್ಲಿ ಬಹುಪರದೆಗಳಿರುವ ಚಿತ್ರಮಂದಿರ ಸಮುಚ್ಛಯವನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು.

ಸಾಮಾಜಿಕ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬಿಂಬಿಸುವ ಕನ್ನಡ ಚಲನಚಿತ್ರಗಳನ್ನು ಡಿಜಿಟಲ್ ಹಾಗೂ ನಾನ್-ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸಲು 3 ಕೋಟಿ ರೂ. ವೆಚ್ಚದಲ್ಲಿ ಚಲನಚಿತ್ರ ಭಂಡಾರವನ್ನು ಸ್ಥಾಪಿಸಲಾಗುವುದು.

ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಪ್ರಸ್ತುತ ನೀಡುತ್ತಿರುವ 12,000 ರೂ. ಮಾಸಾಶನವನ್ನು 15,000 ರೂ.ಗಳಿಗೆ ಹಾಗೂ ಕುಟುಂಬ ಮಾಸಾಶನವನ್ನು 6,000 ರೂ.ಗಳಿಂದ 7,500 ಹೆಚ್ಚಿಸಲಾಗುವುದು.

ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕಾಗಿ OTT ವೇದಿಕೆಯನ್ನು ಸೃಜಿಸಲು ಕ್ರಮಕೈಗೊಳ್ಳಲಾಗುವುದು.

ಮಾಧ್ಯಮ ಮಾನ್ಯತೆ ಹೊಂದಿರುವ ರಾಜ್ಯದ ಒಟ್ಟು 2,500 ಪತ್ರಕರ್ತರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ 5 ಲಕ್ಷ ರೂ.ವರೆಗೆ ನಗದುರಹಿತ ಚಿಕಿತ್ಸೆಗಾಗಿ ‘ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ’ ಅನುಷ್ಠಾನಗೊಳಿಸಲಾಗುವುದು.

ಅಂತಾರಾಷ್ಟ್ರೀಯ ದರ್ಜೆಯ ಚಿತ್ರನಗರಿಯನ್ನು ಮಾದರಿಯಲ್ಲಿ ಅಂದಾಜು 500 ಕೋಟಿ ರೂ. ವೆಚ್ಚದಲ್ಲಿ ಮೈಸೂರಿನಲ್ಲಿ ಸ್ಥಾಪಿಸಲು 150 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ.

ರಾಜ್ಯದ ಮಲ್ಟಿಪ್ಲೆಕ್ಸ್‌ಗಳೂ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಪ್ರತಿ ಪ್ರದರ್ಶನಕ್ಕೆ ಪ್ರವೇಶ ದರವನ್ನು 200 ರೂ.ಗಳಿಗೆ ಸೀಮಿತಗೊಳಿಸಲಾಗುವುದು.