ಸಿದ್ದಾಪುರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಗುರೂಜಿ ಜೊತೆ ಮಹಿಳೆಯ ಅಕ್ರಮ ಸಂಬಂಧದ ಆರೋಪದಿಂದ ಉದ್ಭವಿಸಿದ ವಿವಾದ ಭೀಕರ ಹಲ್ಲೆ ಹಾಗೂ ಕೊಲೆಯಲ್ಲಿ ಅಂತ್ಯಗೊಂಡಿರುವುದು ಸ್ಥಳೀಯವಾಗಿ ಭಾರೀ ಸಂಚಲನ ಮೂಡಿಸಿದೆ.
ಶಿವಮೊಗ್ಗ ಮೂಲದ ಕಮಲಾಕರ ಭಟ್ ಗುರೂಜಿ ಮತ್ತು ಸುಚಿತ್ರಾ ಎಂಬ ಮಹಿಳೆ ನಡುವಿನ ಅನೈತಿಕ ಸಂಬಂಧದ ಬಗ್ಗೆ ಕುಟುಂಬದಲ್ಲಿ ಗಲಾಟೆ ಆರಂಭವಾಗಿದ್ದು, ಈ ವಿಚಾರ ಸುಚಿತ್ರಾ ಪುತ್ರಿಗೆ ತಿಳಿದುಬಂದ ನಂತರ ಆಕೆ ತಂದೆ ಮಹೇಶ್ ನಾಯ್ಕಗೆ ವಿಷಯ ತಿಳಿಸಿದ್ದಾಳೆ. ಬಳಿಕ ಮಹೇಶ್ ನಾಯ್ಕ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದರು ಎನ್ನಲಾಗಿದೆ. ಇದರಿಂದ ಕೋಪಗೊಂಡ ಸುಚಿತ್ರಾ, ಆಕೆಯ ತಂದೆ ಲೋಕನಾಥ ಚೌಡಪ್ಪ ನಾಯ್ಕ ಹಾಗೂ ಅವರ ಸಹಚರರು ಮಹೇಶ್ ನಾಯ್ಕ ಮೇಲೆ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ವೇಳೆ ಮಹೇಶ್ ನಾಯ್ಕ ಜೊತೆಗೆ ಇದ್ದ ವಸಂತ್ ನಾಯ್ಕ ಮತ್ತು ಕುಮಾರ್ ಮೇಲೂ ಹಲ್ಲೆ ನಡೆದಿದ್ದು, ಮೂವರಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದಾಗ ವಸಂತ್ ನಾಯ್ಕ ಚಿಕಿತ್ಸೆಗೂ ಮುನ್ನವೇ ಆಸ್ಪತ್ರೆ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ. ಮಹೇಶ್ ನಾಯ್ಕ ಮತ್ತು ಕುಮಾರ್ರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇನ್ನು ಘಟನೆ ಬಳಿಕ ಕೃತ್ಯವೆಸಗಿ ಪರಾರಿಯಾಗಲು ಯತ್ನಿಸುತ್ತಿದ್ದ ಗುರೂಜಿ ಸೇರಿ ಒಟ್ಟು ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಮೂವರು ಆರೋಪಿಗಳನ್ನು ಶಿವಮೊಗ್ಗದಲ್ಲಿ ಹಾಗೂ ನಾಲ್ವರನ್ನು ಸಿದ್ದಾಪುರ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಪ್ರಕರಣದಲ್ಲಿ ಎ1 ಸುಚಿತ್ರಾ, ಎ2 ಲೋಕನಾಥ ಚೌಡಪ್ಪ ನಾಯ್ಕ, ಎ3 ಇತರ ಸಹಚರರು ಹಾಗೂ ಎ4 ಕಮಲಾಕರ ಭಟ್ ಗುರೂಜಿ ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಗಂಭೀರ ಹಲ್ಲೆ ಪ್ರಕರಣ ದಾಖಲಾಗಿದ್ದು, ಘಟನೆಗೆ ನಿಖರ ಕಾರಣ ಹಾಗೂ ಪಾತ್ರಧಾರಿಗಳ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.










