ನವದೆಹಲಿ: ಸಂಸತ್ ಅಧಿವೇಶನದ ವೇಳೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಘಟನೆಗಳು ಭಾರೀ ಬೇಸರ ತಂದಿವೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಮೈಕ್ ಆಫ್ ಮಾಡುವುದು, ಜನಪ್ರತಿನಿಧಿಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದಿರುವುದು ಸಂಸತ್ತಿನ ಗೌರವಕ್ಕೆ ಧಕ್ಕೆ ತರುವ ಸಂಗತಿಯಾಗಿದೆ ಎಂದಿದ್ದಾರೆ.
ಚರ್ಚೆ, ವಾದ–ವಿವಾದಗಳ ಮೂಲಕವೇ ಪ್ರಜಾಪ್ರಭುತ್ವಬಲವಾಗಬೇಕು. ಅಧಿವೇಶನವನ್ನು ಸಮರ್ಪಕವಾಗಿ ನಡೆಸಲು ಹಾಗೂ ಎಲ್ಲರಿಗೂ ಮಾತನಾಡಲು ಅವಕಾಶ ಕಲ್ಪಿಸಲು NDA ಒಕ್ಕೂಟದ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿರುವ ಅವರು, ಇಂತಹ ಬೆಳವಣಿಗೆಗಳನ್ನು ನೋಡಿದಾಗ “ನಾವು ನಿಜವಾಗಿಯೂ ಯಾವ ದೇಶದಲ್ಲಿದ್ದೇವೆ?” ಎಂಬ ಪ್ರಶ್ನೆ ಮೂಡುತ್ತದೆಎದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಆದರೆ ಸದ್ಯದ ನಡೆಗಳನ್ನು ಗಮನಿಸಿದರೆ ಸಂವಿಧಾನಕ್ಕೆ ಅಪಾಯ ಎದುರಾಗಿರುವ ಆತಂಕ ಕಾಡುತ್ತಿದೆ ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಎಚ್ಚರಿಸಿದ್ದಾರೆ.










