ಶಿವಮೊಗ್ಗ: ನಾಳೆ ಸಿಗಂದೂರು ಬ್ರಿಡ್ಜ್ ಲೋಕಾರ್ಪಣೆ- ಸೇತುವೆ ಯಾಕೆ ವಿಶೇಷ ಗೊತ್ತಾ?

Shivamogga: The decades-long dream of the people of the islands in the Sharavati backwaters has come true. The Sigandooru bridge construction has been completed, and tomorrow, the historic bridge will be inaugurated, with Union Minister Nitin Gadkari set to inaugurate the bridge. The people of the Sharavati backwaters are celebrating the realization of a six-decade-old dream.

ಶಿವಮೊಗ್ಗ: ಶರಾವತಿ ಹಿನ್ನೀರು ಭಾಗದ ದ್ವೀಪಗಳ ಜನರ ದಶಕಗಳ ಕನಸು ನನಸಾಗಿದೆ. ಸಿಗಂಧೂರು ಸೇತುವೆ ಕಾಮಗಾರಿ ಪೂರ್ಣವಾಗಿದ್ದು, ನಾಳೆ ಐತಿಹಾಸಿಕ ಸೇತುವೆ ಲೋಕಾರ್ಪಣೆಗೊಳ್ಳಲಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇತುವೆಗೆ ಚಾಲನೆ ನೀಡಲಿದ್ದಾರೆ. ಆರು ದಶಕದ ಕನಸು ನನಸಾದ ಸಂಭ್ರಮದಲ್ಲಿ ಶರಾವತಿ ಹಿನ್ನೀರು ಭಾಗದ ಜನ ಸಂಭ್ರಮಿಸುತ್ತಿದ್ದಾರೆ.

ಲಾಂಚ್ ಒಂದೇ ಆಧಾರವಾಗಿತ್ತು:

ನಾಡಿನ ಬೆಳಕಿಗಾಗಿ ಅಮೂಲ್ಯವಾದ ಹೊಲ, ಗದ್ದೆ, ಮನೆ ಎಲ್ಲವನ್ನೂ ತ್ಯಾಗ ಮಾಡಿದ ಶರಾವತಿ ಹಿನ್ನೀರು ಪ್ರದೇಶಗಳಾದ ಕರೂರು ಬಾರಂಗಿ ಹೋಬಳಿಯ ನಾಲ್ಕು ಗ್ರಾಮ ಪಂಚಾತಿ ವ್ಯಾಪ್ತಿಯ ಜನರ ಬದುಕಿಗೆ ಹಾಗೂ ನಾಡಿನ ಪ್ರಸಿದ್ದ ಸಿಗಂದೂರು ದೇವಾಲಯಕ್ಕೆ ಸಂಪರ್ಕಕ್ಕೆ ಲಾಂಚ್ ಒಂದೇ ಆಧಾರವಾಗಿತ್ತು. ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯ ವರೆಗೆ ಮಾತ್ರ ತಾಲೂಕು ಹಾಗೂ ಜಿಲ್ಲಾ ಕೇಂದ್ರಕ್ಕೆ ಶರಾವತಿ ಹಿನ್ನೀರು ಭಾಗದ ಜನರ ಸಂಪರ್ಕ ಇರುತ್ತಿತ್ತು. ಸಂಜೆ ಆರು ಗಂಟೆಯ ನಂತರ ಲಾಂಚ್ ಸ್ಥಗಿತಗೊಂಡರೆ ಹಿನ್ನೀರು ಭಾಗದ ಜನರು ಹೊರ ಜಗತ್ತಿನ ಸಂಪರ್ಕವನ್ನು ಕಳೆದುಕೊಳ್ಳುತ್ತಿದ್ದರು. ತೀರಾ ಅನಿವಾರ್ಯತೆ ಇದ್ದರೆ ಸುಮಾರು 85 ಕಿ.ಲೋ ಮೀಟರ್ ಸುತ್ತಿಗೆ ಸಾಗರ ತಾಲೂಕು ಕೇಂದ್ರಕ್ಕೆ ಬರಬೇಕಿತ್ತು.

ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಇಚ್ಛಾಶಕ್ತಿಯ ಫಲ

ಹೀಗಾಗಿ ಕಳೆದ ಹಲವು ದಶಕಗಳಿಂದ ಶರಾವತಿ ಹಿನ್ನೀರು ಭಾಗದ ಜನರು ಕಳಸವಳ್ಳಿ- ಅಂಬಾರಗೋಡ್ಲು – ಸಿಗಂಧೂರು ಸೇತುವೆ ಮಾಡುವಂತೆ ಒತ್ತಾಯಿಸುತ್ತಾ ಬರುತ್ತಿದ್ದರು ಹಾಗಾಗಿ ಜಿಲ್ಲೆಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ ರಾಘವೇಂದ್ರ ಇಚ್ಛಾಶಕ್ತಿ ಪ್ರಯತ್ನದ ಫಲವಾಗಿ 2019ರಲ್ಲಿ ಕೇಬಲ್‌ ಸೇತುವೆ ಕಾಮಗಾರಿ ಪ್ರಾರಂಭವಾಗಿತ್ತು. ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್‌ ಗಡ್ಕರಿ 473 ಕೋಟಿ ರೂ. ವೆಚ್ಚದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿದ್ದರು.

ಐತಿಹಾಸಿಕ ಸೇತುವೆ

ಈ ಸೇತುವೆಯ ಸುಮಾರು 2.14 ಕಿ.ಮೀ. ಉದ್ದ ಹಾಗೂ 16 ಮೀಟರ್ ಅಗಲವನ್ನು ಹೊಂದಿದೆ. 473 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಯು 2020ರ ಡಿಸೆಂಬರ್‌ನಲ್ಲಿ ಪ್ರಾರಂಭವಾಯಿತು. ಆದರೆ ಕೊರೊನಾ ಹಾಗೂ ಹೆಚ್ಚಿನ ಪ್ರಮಾಣದ ಹಿನ್ನೀರಿನ ಕಾರಣ ಆರಂಭದ ಎರಡು ನಿಧಾನವಾಗಿ ಸಾಗಿದ ಕಾಮಗಾರಿ ಕೆಲಸ ನಂತರ ವೇಗ ಪಡೆದು ಈಗ ಸೇತುವೆ ಲೋಕಾರ್ಪಣೆಗೊಳ್ಳುತ್ತಿದೆ. ಸೇತುವೆ ನಿರ್ಮಾಣಕ್ಕಾಗಿ ಜಿಲ್ಲಾ ಹೆದ್ದಾರಿಯನ್ನ ರಾಷ್ಟ್ರೀಯ ಹೆದ್ದಾರಿ 369ಎ ಆಗಿ ಪರಿವರ್ತನೆ ಮಾಡಿ ಸೇತುವೆ ನಿರ್ಮಾಣ ಮಾಡಲಾಗಿದ್ದು ಇದೊಂದು ಐತಿಹಾಸಿಕ ಸೇತುವೆ ಆಗಲಿದೆ.

ಎರಡು ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಕೇಬಲ್ ಆಧಾರಿತ ಸೇತುವೆ

ಇನ್ನು ಈ ಸೇತುವೆಯು ಕರ್ನಾಟಕದ ಎರಡು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರು ಮೂಕಾಂಬಿಕೆ ಮತ್ತು ಸಿಗಂಧೂರು ಚೌಡೇಶ್ವರಿ ದೇವಸ್ಥಾನಗಳನ್ನು ಸಂಪರ್ಕಿಸುವ 2.14 ಕಿ.ಮೀ ಉದ್ದದ ಸಿಗಂಧೂರು ಕೇಬಲ್ ಸೇತುವೆ 24 ಗಂಟೆಯಲ್ಲಿ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ. ಸಿಗಂಧೂರು ಸೇತುವೆಯು ಭಾರತದ ಕೇಬಲ್ ಆಧಾರಿತ ಸೇತುವೆಗಳಲ್ಲಿ 2ನೇ ಅತಿದೊಡ್ಡ ಸೇತುವೆ ಎಂಬ ಖ್ಯಾತಿ ಪಡೆಯಲಿದೆ. ಹಾಗಾಗಿ ಆರು ದಶಕಗಳಿಂದ ಸಂಚಾರದ ಮೂಲಭೂತ ಸೌಕರ್ಯಗಳನ್ನೇ ಕಾಣದೆ ಬದುಕುತ್ತಿದ್ದ ಶರಾವತಿ ಹಿನ್ನೀರು ಭಾಗದ ಜನ ತಮ್ಮ ಮನೆಯ ಹಬ್ಬದ ಸಂಭ್ರಮದಂತೆ ಊರಿನ ಜನರು ಬಂದು ತಾವೇ ಸ್ವಯಂ ಕೃತವಾಗಿ ಲೋಕಾರ್ಪಣೆಗೊಳ್ಳುವ ಸೇತುವೆಗೆ ತೋರಣ, ಬಾಳೆದಿಂಡು ಕಟ್ಟಿ ಸ್ವತಂತ್ರ ಸಿಕ್ಕಷ್ಟೇ ಸಂಭ್ರಮಿಸುತ್ತಿದ್ದಾರೆ.

ಪ್ರತಿ ಮನೆಯಲ್ಲಿಯೂ ಸಂಭ್ರಮ

ಸಿಗಂಧೂರು ಸೇತುವೆ ನಿರ್ಮಾಣದಿಂದಾಗಿ ಶರಾವತಿ ಹಿನ್ನೀರು ಭಾಗದ ಜನರ ಕನಸು ನನಸಾಗಿದ್ದು ಶರಾವತಿ ಹಿನ್ನೀರು ಭಾಗದಲ್ಲಿ ಪ್ರತಿಮನೆಯಲ್ಲೂ ಸಂಭ್ರಮ ಮನೆ ಮಾಡಿದೆ.